ಹನೂರು:ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಶ್ರುತಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಂದ ಅನುಪಾಲನಾ ವರದಿ ಪಡೆದು ಮಾತನಾಡಿದರು.
ಹನೂರು ಭಾಗದಲ್ಲಿ ಕೆಲ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದೀಗ ಶಾಲೆಗಳು ಆರಂಭವಾಗಿರುವುದರಿಂದ ಆಯಾ ಗ್ರಾಮಗಳಲ್ಲಿ ವಿಶೇಷ ದಾಖಲಾತಿ ಆಂದೋಲನವನ್ನು ಕೈಗೊಂಡು ಮನೆ ಮನೆಗೆ ಭೇಟಿ ನೀಡಿ ಪಾಲಕರನ್ನು ಮನವೊಲಿಸಿ ಮಕ್ಕಳು ಮರಳಿ ಶಾಲೆಗೆ ಕರೆ ತರುವ ಕೆಲಸವಾಗಬೇಕು. ಈ ಮೂಲಕ ಯಾವುದೇ ಮಗು ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ಬಾರಿಯ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಅಗತ್ಯ ಕ್ರಮವಹಿಸಬೇಕು. ಅಗತ್ಯವಿರುವ ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ದುರಸ್ತಿಗೊಂಡಿರುವ ಶೌಚಗೃಹಗಳು ರಿಪೇರಿ ಪಡಿಸಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಪ್ರತಿಭಾ ಅವರಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್, ಪ್ಯಾನ್, ಶೌಚಗೃಹ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯ ಕೊರತೆಯಾಗದಂತೆ ಹಾಗೂ ಅರ್ಧಕ್ಕೆ ನಿಂತಿರುವ ಶೌಚಗೃಹ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಿಡಿಪಿಒ ಅಂಬಿಕಾ ಅವರಿಗೆ ಸೂಚಿಸಿದರು.
ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ತಾಲೂಕಿನಲ್ಲಿ 48 ಕಡೆಗಳಲ್ಲಿ ಘಟಕಗಳನ್ನು ನಿರ್ಮಿಸಲಾಗಿದ್ದು, 36 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ದುರಸ್ತಿಗೊಂಡಿರುವ 16 ಘಟಕಗಳನ್ನು ರಿಪೇರಿ ಪಡಿಸಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಪೂರ್ಣಿಮಾ ಅವರಿಗೆ ಸೂಚಿಸಿದರು. ಹಿಂದಿನ ಸಭೆಯಲ್ಲಿ ತಿಳಿಸಿದಂತೆ ನರೇಗಾ ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ತೆಂಗು ಸೇರಿದಂತೆ ಹಣ್ಣಿನ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗೆ ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಎಇಇ ಕುಮಾರ್, ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ವ್ಯವಸ್ಥಾಪಕ ರಮೇಶ್, ಪಿಡಿಒಗಳು ಹಾಗೂ ಇನ್ನಿತರರು ಇದ್ದರು.