ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್ ಅವರು ್ಲ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಗೆ ಘೋಷಣಾ ಪತ್ರವನ್ನು ವಿತರಿಸಿದರು. ಡಾ.ಎಸ್.ಚಿದಂಬರ, ಡಾ.ಎಂ.ಎಸ್.ರವಿಕುಮಾರ್, ಟಿ. ಜವರೇಗೌಡ, ಡಾ.ಸುಂದರೇಶ್, ಡಾ.ರಾಜೇಶ್ ಇತರರಿದ್ದರು.
ಚಾಮರಾಜನಗರ: ಕ್ಷಯರೋಗ ತಡೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕ್ಷಯರೋಗ ದಿನಾಚರಣೆ ಹಾಗೂ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳಿಗೆ ಘೋಷಣಾ ಪತ್ರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಪ್ರಪಂಚದಲ್ಲಿ ಪತ್ತೆಯಾಗುವ ಕ್ಷಯರೋಗ ಪೈಕಿ ಶೇ. 27ರಷ್ಟು ನಮ್ಮ ದೇಶದಲ್ಲೇ ಕಂಡು ಬರುತ್ತಿದೆ. ಜಿಲ್ಲೆಯಲ್ಲೂ ಕ್ಷಯರೋಗದ ಪ್ರಕರಣಗಳು ಇಳಿಮುಖವಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರವೂ ಅತ್ಯಂತ ಮುಖ್ಯವಾಗಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಕ್ಷಯರೋಗ ಪ್ರಕರಣಗಳು ಕಡಿಮೆಯಾಗಲು ಕಾರ್ಯನಿರ್ವಹಿಸಬೇಕು ಎಂದರು.
ಕ್ಷಯಮುಕ್ತ ಗ್ರಾಮ ಪಂಚಾಯಿತಿ ಘೋಷಣೆಗೆ 35 ಗ್ರಾಮ ಪಂಚಾಯಿತಿಗಳು ಮೊದಲನೆ ಬಾರಿಗೆ, 15 ಗ್ರಾಮ ಪಂಚಾಯಿತಿಗಳು ಎರಡನೇ ಬಾರಿಗೆ ಹಾಗೂ 5 ಗ್ರಾಮ ಪಂಚಾಯಿತಿಗಳು ಮೂರನೇ ಬಾರಿಗೆ ಆಯ್ಕೆಯಾಗಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿ. ಕ್ಷಯರೋಗ ನಿರ್ಮೂಲನೆಗೆ ನಿರಂತರ ಪ್ರಯತ್ನ ನಡೆಯಲಿ. ಕ್ಷಯಮುಕ್ತ ಗ್ರಾಮ ಪಂಚಾಯಿತಿ ಅರ್ಹತೆ ಹೊಂದಲು ಶ್ರಮಿಸಿದ ಎಲ್ಲರಿಗು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ಕ್ಷಯರೋಗ ತಡೆಯುವಲ್ಲಿ ಇಡೀ ತಂಡವಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಈಗಾಗಲೇ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳಾಗಲು ಮಾಡಿದ ಸಾಧನೆ ನಿರಂತರವಾಗಿರಲು ಪ್ರಯತ್ನಗಳು ಮುಂದುವರೆಯಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷಯರೋಗದಂತಹ ಲಕ್ಷಣಗಳು ಕಂಡುಬಂದರೆ ಕುಡಲೇ ತಪಾಸಣೆಗೆ ಒಳಗಾಗಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್.ರವಿಕುಮಾರ್ ಮಾತನಾಡಿ, ದೇಶದಲ್ಲಿ ಪ್ರತಿವರ್ಷ 27 ಲಕ್ಷಕ್ಕೂ ಹೆಚ್ಚು ಕ್ಷಯರೋಗ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 2024ರಲ್ಲಿ 35 ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತ ಎಂದು ಘೋಷಿಸಲಾಗಿತ್ತು. 2025ರಲ್ಲಿ 55 ಗ್ರಾಮ ಪಂಚಾಯಿತಿಗಳು ಕ್ಷಯಮುಕ್ತವೆಂದು ಘೋಷಿಸಿ ಪ್ರಮಾಣ ಪತ್ರ ಪಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳಿಗೆ ಘೋಷಣಾ ಪತ್ರವನ್ನು ಗಣ್ಯರು ವಿತರಿಸಿದರು. ಇದೇ ಸಂದರ್ಭದಲ್ಲಿ ಎಚ್.ಐ.ವಿ ಸ್ಥಿತಿಯನ್ನು ತಿಳಿದುಕೊಳ್ಳುವ ಮಿಷನ್ ಏಡ್ಸ್ ಸುರಕ್ಷತಾ ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ.ಸುಂದರೇಶ್, ಡಾ.ರಾಜೇಶ್, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ರಾಜೀವ್ ಇತರರಿದ್ದರು.