ವಿಧಾನಮಂಡಲ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರಿಂದ ಉತ್ತರ ಪಡೆದ ಶಾಸಕರು ಮಾತನಾಡಿ, ಹನೂರು ಕ್ಷೇತ್ರ ಭೌಗೋಳಿಕವಾಗಿ ವಿಸ್ತೀರ್ಣವಾಗಿದ್ದು, ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ವಿಭಿನ್ನವಾಗಿದೆ. ಕಾಡಂಚಿನಲ್ಲಿರುವ 10 ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ವರ್ಷ ರಾಜ್ಯಕ್ಕೆ ಹೋಲಿಸಿದರೆ ಹನೂರು ಕ್ಷೇತ್ರದಲ್ಲಿ ಮಳೆ ಕಡಿಮೆಯಾಗಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಇದರಿಂದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಇದರಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ನೀರು ಸಿಗುವವರೆಗೂ ಬೋರ್ ಕೊರೆಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರಿಗೂ ಹಲವು ಬಾರಿ ಗಮನಕ್ಕೆ ತರಲಾಗಿದೆ. ಮುಂಬರುವ 2-3 ತಿಂಗಳು ಜನರಿಗೆ ನೀರೊದಗಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಳೆ ಬಂದ ವೇಳೆ ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹಣೆ ಹಾಗೂ ಅಂತರ್ಜಲ ವೃದ್ಧಿಗೆ ಇಲಾಖೆಯಿಂದ ಯೋಜನೆ ರೂಪಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.