

ಪ್ರಮುಖ ಮುಖ್ಯಾಂಶಗಳು
ಚಾಮರಾಜನಗರ:
ಚಾಮರಾಜನಗರ ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.
ಮಳೆಯಿಲ್ಲದೆ ಒಳಗುತ್ತಿರುವ ಜೋಳ, ಸೂರ್ಯಕಾಂತಿ, ಕಬ್ಬು ಬೆಳೆಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರೈತರಿಂದ ಅಹವಾಲುಗಳನ್ನು ಆಲಿಸಿದರು. ಬೆಳೆ ಹಾನಿ ಬಗ್ಗೆ ಪ್ರಾಥಮಿಕ ವಿವರ ಪಡೆದ ಸಚಿವರು ಬೆಳೆ ನಷ್ಟದ ಕುರಿತ ಸಮರ್ಪಕ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಾದಲವಾಡಿಯಲ್ಲಿ ಗ್ರಾಮಸ್ಥರು ರಸ್ತೆ, ಮನೆಗಳಿಗೆ ನೀರು ನುಗ್ಗದಂತೆ ಚರಂಡಿ, ಶಿಥಿಲವಾಗಿರುವ ಅಂಗನವಾಡಿ ಕಟ್ಟಡವನ್ನು ದುರಸ್ತಿ ಅಥವಾ ಹೊಸದಾಗಿ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.
ಹೆಗ್ಗೋಠಾರದಲ್ಲಿ ಕುಡಿಯುವ ನೀರು, ಮೇವು ಸಮಸ್ಯೆಯನ್ನು ಸ್ಥಳೀಯರು ಸಚಿವರ ಗಮನಕ್ಕೆ ತಂದು ಪರಿಹರಿಸಿಕೊಡುವಂತೆ ಕೋರಿದರು. ಜಾನುವಾರುಗಳಿಗೂ ಕುಡಿಯುವ ನೀರಿಗೆ ತೊಂದರೆಯಾಗಿದೆ. ಹೀಗಾಗಿ ನೀರು ಶೇಖರಣೆಗೆ ತುರ್ತಾಗಿ ವ್ಯವಸ್ಥೆಯಾಗಬೇಕು. ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡರು. ಇದೇ ವೇಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸಚಿವರು ಭೇಟಿ ನೀಡಿದರು.