ಜಿಲ್ಲಾದ್ಯಂತ ಮಹಾವೀರ ಜಯಂತಿ ಆಚರಣೆ

 ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು. ಸುರೇಶ್ ಋಗ್ವೇದಿ, ಎಲ್.ಶಿವಲಿಂಗಮೂರ್ತಿ, ರವಿಚಂದ್ರಪ್ರಸಾದ್, ಸುರೇಶ್‌ಗೌಡ, ಬಿ.ಕೆ.ಆರಾಧ್ಯ ಹಾಜರಿದ್ದರು.
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು. ಸುರೇಶ್ ಋಗ್ವೇದಿ, ಎಲ್.ಶಿವಲಿಂಗಮೂರ್ತಿ, ರವಿಚಂದ್ರಪ್ರಸಾದ್, ಸುರೇಶ್‌ಗೌಡ, ಬಿ.ಕೆ.ಆರಾಧ್ಯ ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಪುಷ್ಪ ನಮನ ಸಲ್ಲಿಕೆ
  • ಶಾಂತಿ ಬೋಧಿಸಿದ ಮಹಾವೀರರ ಸ್ಮರಣೆ
ಚಾಮರಾಜನಗರ: ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದ ಭಗವಾನ್ ಮಹಾವೀರ ಜಯಂತಿಯನ್ನು ಸೋಮವಾರ ಜಿಲ್ಲಾದ್ಯಂತ ಆಚರಣೆ ಮಾಡಲಾಯಿತು.
ಚಾಮರಾಜನಗರದ ಜೈನ ಬಸದಿಯಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಲಾಯಿತು. ಸಂಜೆ ವೇಳೆ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಜೈನ ಕ್ಷೇತ್ರವಾಗಿರುವ ಕನಕ ಗಿರಿಯಲ್ಲಿ ವಿಶೇಷ ಪೂಜೆಗಳು ನಡೆದವು. ತಾಲೂಕುಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಮಹಾವೀರರ ಜಯಂತಿ ಆಚರಣೆ ಮಾಡಿದವು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ತಾಲೂಕು ಕಸಾಪ ವತಿಯಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ ಮಾಡಲಾಯಿತು. ಈ ವೇಳೆ ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಜಗತ್ತಿಗೆ ಶಾಂತಿಯ ತತ್ವವನ್ನು ಬೋಧಿಸಿದ ಮಹಾವೀರರ ಸಂದೇಶಗಳು ವರ್ತಮಾನದಲ್ಲಿ ತುಂಬಾ ಅಗತ್ಯವಿದೆ. ಇಡೀ ಜಗತ್ತು ಶಕ್ತಿಯ ಸ್ವರೂಪದಲ್ಲಿ, ಸ್ವಾರ್ಥದ ರೂಪವನ್ನು ತಾಳಿ ಯುದ್ಧದ ಕಾರ್ಮೋಡದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಮಹಾವೀರರ ದಿವ್ಯ ಶಾಂತಿ ಮಂತ್ರ ತುಂಬಾ ಅನಿವಾರ್ಯವಾಗಿದೆ ಎಂದರು.
ಸಕಲ ಜೀವಿಗಳ ಮೇಲೂ ದಯೆ, ಕರುಣೆ ಪ್ರೀತಿ ಇಡಬೇಕು. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಜಗತ್ತಿಗೆ ಸಾರಿದ ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ತಾವು ಕಂಡ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಶಾಂತಿಧೂತರಾಗಿ ಜಗತ್ತಿಗೆ ಕಲ್ಯಾಣವನ್ನು ಬಯಸಿದವರು ಎಂದು ಬಣ್ಣಿಸಿದರು.
ಕಸ್ತೂರಿ ಕನ್ನಡ ಸಂಘದ ಮುಖಂಡರಾದ ಬೂದಿತಿಟ್ಟು ಲಿಂಗರಾಜು ಮಾತನಾಡಿ, ಸರಳ ಜೀವನ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾವೀರರು ಚಿಂತನೆಗೆ ಹೆಸರಾದವರು. ನಾವು ಕೂಡ ಸರಳವಾಗಿ ಬದುಕುವ, ಕಾಯಕವನ್ನು ಪ್ರೀತಿಸುವ ಕೆಲಸವನ್ನು ಮಾಡೋಣ ಎಂದರು.
ದೊಡ್ಡರಾಯಪೇಟೆ ದೊರೆಸ್ವಾಮಿ ಹಾಗೂ ನಗರಸಭಾ ಮಾಜಿ ಸದಸ್ಯೆ ಪದ್ಮ ಪುರುಷೋತ್ತಮ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ಉದ್ಘಾಟಿಸಿ ಶುಭ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಬಿ.ಕೆ ಆರಾಧ್ಯ, ರವಿಚಂದ್ರಪ್ರಸಾದ್, ಎಲ್.ಶಿವಲಿಂಗಮೂರ್ತಿ, ಗೀತಾ, ಸುರೇಶ್ ಗೌಡ, ಮಂಜುನಾಥ್, ಮಹೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net