ಮಹದೇವಪ್ಪರಿಂದಲೇ ಬಲಗೈ ಸಮುದಾಯಕ್ಕೆ ದ್ರೋಹ

ಚಾಮರಾಜನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿದರು.
ಚಾಮರಾಜನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಆರೋಪ
  • ಬಲಗೈ ಸಂಬಂಧಿತ ಜಾತಿಗಳಿಗೆ ದ್ರೋಹ
  • ಒಳಮೀಸಲಾತಿ ರೋಸ್ಟರ್ ಪದ್ಧತಿಯನ್ನು ಸರಿಪಡಿಸುವಂತೆ ಆಗ್ರಹ
ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಒಳಮೀಸಲಾತಿ ಜಾರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಹಿ ಹಾಕುವ ಮೂಲಕ ಬಲಗೈ ಸಂಬಂಧಿತ ಜಾತಿಗಳಿಗೆ ದ್ರೋಹ ಎಸಗಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಕಾರ್ಯಾಧ್ಯಕ್ಷ ಸಿ.ಕೆ.ಮಂಜುನಾಥ್ ಆರೋಪಿಸಿದರು.
ಕಳೆದ 6 ತಿಂಗಳ ಹಿಂದೆಯೇ ಒಳಮೀಸಲಾತಿ ಜಾರಿಯಾಗಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮೀಸಲಾತಿಯ ಮಹತ್ವವನ್ನು ಅರಿಯದೇ ಬಲಗೈ ಸಂಬಂಧಿತ ಜಾತಿಗಳಿಗೆ ದ್ರೋಹ ಎಸಗಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಅವರು ಭಾಗಿಯಾಗದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಅಸ್ಪ್ರಶ್ಯತೆ ಮತ್ತು ಅಪಮಾನವನ್ನು ಅನುಭವಿಸಿದವರಿಗೆ ಮಾತ್ರ ಮೀಸಲಾತಿ ಮಹತ್ವ ಅರ್ಥವಾಗುತ್ತದೆ. ಬಲಗೈ ಸಚಿವರಿಗೆ ಈ ಕುರಿತು ಕಾಳಜಿ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿಯ ಹೆಸರಿನಲ್ಲಿ ಪರಿಶಿಷ್ಟ ಸಮುದಾಯವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ನಮ್ಮ ಬಲಗೈ ಕಾಂಗ್ರೆಸ್ ಸಚಿವರಿಗೆ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಮಾದಿಗರು ಮತ್ತು ಹೊಲೆಯರು ನಡೆಸಿದ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಬಾರದೇ, ಅವರ ನಿಲುವನ್ನು ತೋರಿಸಿದ್ದಾರೆ. ಒಳಮೀಸಲಾತಿ ರೋಸ್ಟರ್ ಪದ್ಧತಿಯನ್ನು ಸರಿಪಡಿಸಬೇಕು. ಬಿಜೆಪಿ ನಾಯಕರು ಕೂಡ ಒಂದು ಜನಾಂಗವನ್ನು ಓಲೈಕೆ ಮಾಡದೇ ಒಳಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಮೂಡ್ನಕೂಡು ಪ್ರಕಾಶ್, ಸಿದ್ದರಾಜು, ಶಿವಸ್ವಾಮಿ, ಸಿದ್ದರಾಜು, ರಮೇಶ್, ಬಾಬು ರಾಮಸಮುದ್ರ, ರಂಗಸ್ವಾಮಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net