ಮಾದಪ್ಪನ ‘ತೇರು’ ಜತೆಗೆ ‘ಹೊನ್ನೇರು’ ಸಂಭ್ರಮ

 ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಸಜ್ಜುಗೊಂಡಿರುವ ತೇರು
ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಸಜ್ಜುಗೊಂಡಿರುವ ತೇರು
Published on

ಪ್ರಮುಖ ಮುಖ್ಯಾಂಶಗಳು

  • ಮಹದೇಶ್ವರ ಬೆಟ್ಟದಲ್ಲಿ ಇಂದು ಯುಗಾದಿ ಮಹಾ ರಥೋತ್ಸವ
  • ಹಬ್ಬದ ಪ್ರಯುಕ್ತ ಎತ್ತುಗಳಿಗೆ ಪೂಜೆ, ಉಳುಮೆ ಆರಂಭ
ಚಾಮರಾಜನಗರ: ಪ್ರಕೃತಿಯ ಪುನರುಜ್ಜೀವನ ಮತ್ತು ಸೃಷ್ಟಿಯ ದಿನವಾದ ಯುಗಾದಿ ಹಬ್ಬ ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಾದಪ್ಪನ ಮಹಾ ತೇರು ಮತ್ತು ರೈತರ ಹೊನ್ನೇರು ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.
ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ಯುಗಾದಿ ಮಹಾ ರಥೋತ್ಸವ ನಡೆಯಲಿದೆ. ಉತ್ಸವದಲ್ಲಿ ವಿವಿಧ ಜಿಲ್ಲೆಗಳ ಅಸಂಖ್ಯಾತ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಭಕ್ತಿಯ ಬುಗ್ಗೆಯ ನಡುವೆ ಮಲೆ ಮಹದೇಶ್ವರ ಬೆಟ್ಟವೂ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅನ್ನದಾತರು ಹೊನ್ನೇರು ಕಟ್ಟಿ ಹಬ್ಬ ಆಚರಣೆ ಮಾಡುತ್ತಾರೆ.
ರೈತರು ಎತ್ತುಗಳನ್ನು ಸಿಂಗರಿಸಿ, ಪೂಜೆ ಮಾಡಿ, ಉಳುಮೆ ಶುರು ಮಾಡಿ, ಗೊಬ್ಬರವನ್ನು ಜಮೀನುಗಳಿಗೆ ಹಾಕುವ ಮೂಲಕ ಹೊಸ ವರ್ಷದ ಮೊದಲ ಕೃಷಿ ಚಟುವಟಿಕೆಗೆ ನಾಂದಿ ಹಾಡುತ್ತಾರೆ. ಒಂದು ಹಬ್ಬ ಹಲವು ಸಂಪ್ರದಾಯಗಳ ಬೇರು ಎನ್ನುವಂತೆ ಯುಗಾದಿ ಹಬ್ಬ ಒಂದೆಡೆ ತೇರು, ಮತ್ತೊಂದೆಡೆ ಹೊನ್ನೇರು ಸಡಗರವನ್ನು ಸೃಷ್ಟಿಸಲಿದೆ.
ಇಂದು ಯುಗಾದಿ ಮಹಾ ರಥೋತ್ಸವ:
ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಯುಗಾದಿ ಅಮಾವಾಸ್ಯೆ ಮಹಾ ರಥೋತ್ಸವ ಬೆಳಗ್ಗೆ 9.45ರಿಂದ 11 ಗಂಟೆಯವರೆಗೆ ನಡೆಯಲಿದೆ. ಜನಸಾಗರದ ನಡುವೆ ಸಾಗುವ ರಥವನ್ನು ಬೇಡಗಂಪಣ ಅರ್ಚಕರು ಸಂಪ್ರದಾಯದಂತೆ ಕಟ್ಟುವ ಕೆಲಸ ಮಾಡಿ ಮುಗಿಸಿದ್ದಾರೆ. ಭಕ್ತಿಯ ಪ್ರತೀಕವಾಗಿರುವ ರಥವನ್ನು ಕಟ್ಟಲು ಬೇಡಗಂಪಣ ಅರ್ಚಕರು ಉಪವಾಸವಿದ್ದುಕೊಂಡು ಬರಿಗಾಲಿನಲ್ಲಿ ಪೊನ್ನಾಚಿ ಮಲೆಗೆ ಹೋಗಿ ಬಿದಿರು ತಂದಿದ್ದಾರೆ. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಮುಹೂರ್ತ ಕಂಬಕ್ಕೆ ಪೂಜೆಯಾದ ಬಳಿಕ ರಥ ಕಟ್ಟುವ ಕೆಲಸಕ್ಕೆ ಚಾಲನೆಗೊಂಡು ಬೇಡಗಂಪಣ ಅರ್ಚಕರ ಶ್ರಮದ ಮೂಲಕ ಅಂತಿಮವಾಗಿ ತೇರು ಸಿದ್ಧಗೊಂಡಿದೆ. ರಥೋತ್ಸವದ ಪ್ರಯುಕ್ತ ದೇವಸ್ಥಾನದ ಗರ್ಭಗುಡಿ ಮತ್ತು ಪ್ರಾಂಗಣವನ್ನು ಲ, ಪುಷ್ಪ, ತರಕಾರಿಗಳಿಂದ ಸಿಂಗಾರಿಸಿರುವುದು ಭಕ್ತರ ಕಣ್ಮನ ಸೆಳೆಯುತ್ತಿದೆ.
ಹೊನ್ನೇರು ಕಟ್ಟಲು ತಯಾರಿ:
ಮಲೆ ಮಹದೇಶ್ವರ ಬೆಟ್ಟದಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳುವ ಸ್ಥಳೀಯ ರೈತರು ಬಳಿಕ ಹೊನ್ನೇರು ಕಟ್ಟಿ ಕೃಷಿ ಚಟುವಟಿಕೆ ಶುರು ಮಾಡುತ್ತಾರೆ. ಗುಡ್ಡಗಾಡು ಪ್ರದೇಶವಾಗಿರುವ ಮಹದೇಶ್ವರ ಬೆಟ್ಟದಲ್ಲಿ ದೇಸಿ ತಳಿಯ ಎತ್ತುಗಳು, ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುವುದು ಸುಸ್ಥಿರ ಬದುಕಿನ ಸಂಕೇತವಾಗಿದೆ. ಈ ಭಾಗದಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದರೂ ಮಿಶ್ರ ಬೆಳೆ ಪದ್ಧತಿ ಅನುಸರಿಸಲಾಗುತ್ತಿದೆ. ರಾಗಿ ಸುತ್ತಲೂ ಹುಚ್ಚಳ್ಳು ಹಾಕಲಾಗುತ್ತದೆ. ಅವರೇ, ಅರಳೆ, ಹಲಸಂದೆ, ಸಾಸಿವೆ, ಆರಕ ಬೆಳೆಯಲಾಗುತ್ತದೆ. ಪೂರ್ವ ಮುಂಗಾರಿಗೆ ಈ ಬೆಳೆ ಹಾಕಲು ಜಮೀನು ಹದಗೊಳಿಸಲಾಗುತ್ತದೆ. ಒಂದರ್ಥದಲ್ಲಿ ಇದು ಕೃಷಿಗೆ ಮುನ್ನುಡಿ ಬರೆಯುವ ದಿನವೆಂದೇ ಹೇಳುವ ಆಚರಣೆ. ಈ ಸಂಪ್ರದಾಯ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ. ಮುಂಜಾನೆಯೇ ಎತ್ತುಗಳನ್ನು ಸ್ವಚ್ಛಗೊಳಿಸಿ ತಾವೂ ಶುದ್ಧಗೊಂಡು, ಕುಟುಂಬ ಸಮೇತ ಜಮೀನಿಗೆ ಹೋಗಿ, ನೇಗಿಲು, ನೊಗ, ಎತ್ತು ಮತ್ತು ಭೂಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಜಮೀನಿಗೆ ಗೊಬ್ಬರ ಹಾಕಲಾಗುತ್ತದೆ. ನಂತರ ಮನೆಯಲ್ಲಿ ಹಬ್ಬದೂಟ ಮಾಡಿ ಸವಿಯಲಾಗುತ್ತದೆ. ಕೃಷಿ ಕ್ಷೇತ್ರಕ್ಕೆ ಯಂತ್ರೋಪಕರಣ, ವಾಹನಗಳು ಪ್ರವೇಶ ಮಾಡಿದರೂ ಎತ್ತುಗಳಿಗೆ ಪೂಜೆ ಸಲ್ಲಿಸಿ ಉಳುಮೆ ಆರಂಭಿಸುವ ಹೊನ್ನೇರು ಧಾರ್ಮಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ.
ರಥೋತ್ಸವಕ್ಕೆ ಪೊಲೀಸರ ನಿಯೋಜನೆ:
ಮಲೆ ಮಹದೇಶ್ವರ ಬೆಟ್ಟದ ರಥೋತ್ಸವ ಸುಸೂತ್ರವಾಗಿ ನಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 200 ಜನ ಪೊಲೀಸರು, ಗೃಹ ರಕ್ಷಕ ದಳ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್, 4 ಜಿಲ್ಲಾ ಸಶಸ ಮೀಸಲು ಪಡೆ, 2 ಡಿವೈಎಸ್ಪಿ ಕರ್ತವ್ಯ ನಿರ್ವಹಿಸಲಿದೆ. ವಾಹನಗಳ ಸಂಚಾರಕ್ಕೆ ಎಂದಿನಂತೆ ಅವಕಾಶವಿರಲಿದೆ ಎಂದು ಕೊಳ್ಳೇಗಾಲ ಡಿವೈಎಸ್ಪಿ ಧಮೇಂದ್ರ ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿ ಗಸ್ತು:
ಯುಗಾದಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಜನವರಿಯಲ್ಲಿ ಬೆಟ್ಟಕ್ಕೆ ಪಾದಯಾತ್ರೆ ಬರುತ್ತಿದ್ದ ಮಂಡ್ಯದ ಚೀರನಹಳ್ಳಿಯ ಭಕ್ತ ಪ್ರವೀಣ್ ಚಿರತೆ ದಾಳಿಗೆ ಬಲಿಯಾಗಿದ್ದ. ಚಿರತೆಯನ್ನು ಸೆರೆ ಹಿಡಿಯಲಾಯಿತು. ಬಳಿಕ ಮತ್ತೊಂದು ಚನ್ನಪಟ್ಟಣದ ಶ್ರೇಯಸ್ ಮೇಲೂ ದಾಳಿ ಮಾಡಿತ್ತು. ಅದೃಷ್ಟವಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಮತ್ತೆ ಅನಾಹುತ ಸಂಭವಿಸದೆ ಇರಲು ಅರಣ್ಯ ಇಲಾಖೆ ಗಸ್ತು ನಡೆಸುವ ಕಾರ್ಯವನ್ನು ಮುಂದುವರೆಸಿದೆ. ಈ ಕುರಿತು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎ್ ಭಾಸ್ಕರ್ ವಿಜಯವಾಣಿಯೊಂದಿಗೆ ಮಾತನಾಡಿ, ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸುಕ್ಷತೆ ದೃಷ್ಟಿಯಿಂದ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ ಎಂದಿದ್ದಾರೆ.
ಸನ್ನಿಧಿಗೆ ಬಂದ ಲಕ್ಷ ಲಕ್ಷ ಭಕ್ತರು:
ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಮತ್ತು ಭಾನುವಾರ ಅಂದಾಜು 3 ಲಕ್ಷ ಪಾದಯಾತ್ರಿಗಳು ಬಂದು ಹೋಗಿದ್ದಾರೆ. ರಥೋತ್ಸವಕ್ಕೆ 1 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
"

ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗುರುವಾರ ರಥೋತ್ಸವ ನಡೆಯಲಿದೆ. ಶ್ರೀಮಠದಿಂದ ಹೊಸ ವರ್ಷದಲ್ಲಿ ಮಾದಪ್ಪನ ಕೃಪೆಯಿಂದ ಮಳೆ, ಬೆಳೆ ಚೆನ್ನಾಗಿ ಆಗಲಿ ರೈತರಿಗೆ ಒಳ್ಳೆಯದಾಗಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪೀಠಾಧಿಪತಿ, ಸಾಲೂರು ಬೃಹನ್ಮಠ, ಮಹದೇಶ್ವರ ಬೆಟ್ಟ

"

ಯುಗಾದಿ ಹಬ್ಬ ದಿನ ಒಂದೆಡೆ ಮಹದೇಶ್ವರರ ರಥೋತ್ಸವ ಮತ್ತು ಮತ್ತೊಂದೆಡೆ ಹೊನ್ನೇರು ಕಟ್ಟಿ ಪೂಜೆ ಸಲ್ಲಿಸುವುದು ವಾಡಿಕೆ. ಮಲೆ ಮಹದೇಶ್ವರ ಬೆಟ್ಟದ ರೈತರು ಈ ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬಂದಿದ್ದೇವೆ. ಇದು ನಮ್ಮ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆಯುವ ಪ್ರಕ್ರಿಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net