ಪೋಕ್ಸೋದೊಳಗೆ ‘ಪ್ರೇಮ ಪಾಶದ ಪಾಲು’

 ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಮಕ್ಕಳ ಮೇಲಿನ ಶೋಷಣೆ ಶಿಕ್ಷಣಾರ್ಹ ಅಪರಾಧವೆಂದು ಅರಿವು ಮೂಡಿಸುತ್ತಿರುವ ಪೋಸ್ಟರ್
ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಮಕ್ಕಳ ಮೇಲಿನ ಶೋಷಣೆ ಶಿಕ್ಷಣಾರ್ಹ ಅಪರಾಧವೆಂದು ಅರಿವು ಮೂಡಿಸುತ್ತಿರುವ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ವರ್ಷದಲ್ಲಿ ವರದಿಯಾದ 90ರಲ್ಲಿ 36 ಲವ್ ಕೇಸ್
  • ಲೈಂಗಿಕ ದೌರ್ಜನ್ಯದಲ್ಲಿ ಬಾಲೆ ಮೇಲೆ ತಾಯ್ತನದ ಹೊರೆ
ಚಾಮರಾಜನಗರ: ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆ(ಪೋಕ್ಸೋ) ಪ್ರಕರಣಗಳಲ್ಲಿ ಹದಿಹರೆಯದವರ ಪ್ರೀತಿ, ಪ್ರೇಮದ ಪಾಶದ ಪಾಲು ಬಲು ಹೆಚ್ಚಾಗಿಯೇ ಇದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿ ಪ್ರಕಾರ, 2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ ಚಾಮರಾಜನಗರ-22, ಗುಂಡ್ಲುಪೇಟೆ-22, ಹನೂರು-19, ಕೊಳ್ಳೇಗಾಲ-14, ಯಳಂದೂರು-13 ಪೋಕ್ಸೋ ಪ್ರಕರಣಗಳು ವರದಿಯಾಗಿವೆ. ಒಟ್ಟು 90 ಕೇಸ್‌ಗಳಲ್ಲಿ 36 ಪ್ರೇಮ ಪ್ರಕರಣಗಳಿಂದಾಗಿ ಸಂಭವಿಸಿರುವ ಲೈಂಗಿಕ ದೌರ್ಜನ್ಯಗಳಾಗಿವೆ.
ಹದಿಹರೆಯದ ವಯಸ್ಸಿನಲ್ಲಿ ಲವ್‌ನ ಹೆಸರಿನಲ್ಲಿ ಕಿರಿಕಿರಿ, ಕಿರುಕುಳ, ಶೋಷಣೆ, ದೌರ್ಜನ್ಯ ನಡೆದು ಪೋಕ್ಸೋ ಮೊಕದ್ದಮೆಗಳು ದಾಖಲಾಗುತ್ತಿವೆ. ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಮನೆಯಿಂದ ಕರೆದುಕೊಂಡು ಓಡಿ ಹೋಗುವ ಕೃತ್ಯಕ್ಕೆ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಲೈಂಗಿಕ ದೌರ್ಜನ್ಯವೆಸಗುವ ಕೇಸ್‌ಗಳಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ವರದಿಯಾಗುತ್ತಿವೆ. ಪೋಕ್ಸೋ ಪ್ರಕರಣಗಳಲ್ಲಿ ಜಿಲ್ಲೆಯ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆ ವಿಧಿಸುತ್ತಿರುವ ತೀರ್ಪುಗಳು ಹೊರಬೀಳುತ್ತಲೇ ಇವೆ. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಬರೋಬ್ಬರಿ 20 ವರ್ಷ ಜೈಲು ಶಿಕ್ಷೆ ನೀಡಿ ನೊಂದ ಬಾಲಕಿಗೆ ನ್ಯಾಯ ಕೊಡಿಸಿರುವ ಉದಾಹರಣೆಗಳೂ ಇವೆ.
ಬಾಲೆ ಮೇಲೆ ತಾಯ್ತನದ ಹೊರೆ:
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಒತ್ತು ನೀಡುವ ಸರ್ಕಾರದ ಹಲವು ಕಾರ್ಯಕ್ರಮಗಳ ನಡುವೆಯೂ ಬಾಲ ಗರ್ಭಿಣಿಯರು ಪತ್ತೆಯಾಗುತ್ತಿರುವುದು ಕಳವಳಕಾರಿ. ಜಿಲ್ಲೆಯಲ್ಲಿ ಕಳೆದ 1 ವರ್ಷದಲ್ಲಿ 18 ವರ್ಷದೊಳಗಿನ 23 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಪ್ರೇಮ ಪ್ರಕರಣ ಬಾಲೆಯ ಮೇಲೆ ತಾಯ್ತನದ ಹೊರೆಯನ್ನು ಹೊರಿಸುತ್ತಿದೆ. ಲೈಂಗಿಕ ದೌರ್ಜನ್ಯದಿಂದ ಬಾಲ ಗರ್ಭಿಣಿಯರ ಪ್ರಕರಣಗಳೂ ನಡೆಯುತ್ತಿವೆ. 46 ವರ್ಷ ವಯಸ್ಸಿನ ವ್ಯಕ್ತಿ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಮಾ.26ರಂದು ಬೆಳಕಿಗೆ ಬಂದಿತ್ತು. ಗುಂಡ್ಲಪೇಟೆ ತಾಲೂಕಿನ ಹಳ್ಳಿಯಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ವಾಹನದೊಳಗೆ ಮಗುವಿಗೆ ಜನ್ಮ ನೀಡಿದಳು. ದೌರ್ಜನ್ಯವೆಸಗಿದ 46 ವರ್ಷದ ವ್ಯಕ್ತಿ ಬಾಲಕಿಯ ಸಂಬಂಧಿಯೇ ಆಗಿದ್ದ. ಈತನ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಯಿತು.
ಬಾಲ್ಯ ವಿವಾಹ 27 ಪೋಕ್ಸೋ ಕೇಸ್:
ಬಾಲ್ಯ ವಿವಾಹವೆಂಬ ಪಿಡುಗು ಮನೆಗೆ ಮಗುವಂತೆ ಇರುವ ಬಾಲಕಿಯ ಮಡಿಲಗೆ ಮಗು ತುಂಬಿಕೊಳ್ಳುವ ಅಘಾತಕಾರಿ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ 10 ಬಾಲ ತಾಯಂದಿರಲ್ಲಿ ಬಾಲ್ಯ ವಿವಾಹಗಳ ಪಾಲೂ ಇವೆ. 18 ವರ್ಷದೊಳಗಿನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗವನ್ನು ಅತ್ಯಾಚಾರವೆಂದು ಸರ್ವೋಚ್ಛ ನ್ಯಾಯಾಲಯ 2017ರ ಅಕ್ಟೋಬರ್‌ನಲ್ಲಿ ತೀರ್ಪು ೋಷಿಸಿತ್ತು. ಇದಕ್ಕೆ ಕಾರಣರಾದ ತಂದೆ, ತಾಯಿ, ಅತ್ತೆ, ಮಾವ ಇತರರು ಅಪರಾಧಿಗಳ ಪಟ್ಟಿಗೆ ಸೇರಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹದಿಂದಾಗಿ 27 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಸಹಾಯವಾಣಿಗೆ ಬಾಲಕಿಯರೇ ಕರೆ ಮಾಡಿ ಮಾಹಿತಿ ನೀಡಿ ಮದುವೆ ನಿಲ್ಲಿಸಿರುವ ಪ್ರಕರಣಗಳು ಜಿಲ್ಲೆಗೆಯಲ್ಲಿ ನಡೆದಿವೆ.
ಬಾಲಕರ ಮೇಲೂ ಲೈಂಗಿಕ ದೌರ್ಜನ್ಯ:
ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಬಾಲ್ಯ ವಿವಾಹ ಪ್ರಕರಣಗಳಿಗೆ ಸರಿ ಸಮನಾಗಿವೆ. ಈ ರೀತಿಯ ದೌರ್ಜನ್ಯದಿಂದ 27 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಮಗಳ ವಯಸ್ಸಿನ ಮಗುವಿನ ಮೇಲೂ ದೌರ್ಜನ್ಯವೆಸಗಿರುವ ನೀಚಕೃತ್ಯವೂ ಇದರೊಳಗಿದೆ. ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಬಾಲಕಿಯರು ಮಾತ್ರವಲ್ಲದೆ, ಬಾಲಕರ ಮೇಲೂ ದೌರ್ಜನ್ಯ ನಡೆದಿವೆ. 2024ರ ಜನವರಿಂದ ಸೆಪ್ಟೆಂಬರ್‌ವರೆಗೆ ಒಟ್ಟು 3 ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯ ಹಳ್ಳಿಯೊಂದರಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಕ್ಕದ ಬೀದಿಯವನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದ. ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಸತಿ ಶಾಲೆಯಲ್ಲಿ ಶಿಕ್ಷಕನೊಬ್ಬ ಬಾಲಕನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದ. ಇನ್ನೊಂದು ಪ್ರಕರಣದಲ್ಲಿ ಪಕ್ಕದ ಮನೆಗೆ ನೀರು ಕುಡಿಯಲು ಹೋದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಮಕ್ಕಳಿಗೆ ಉತ್ತಮ ಆರೋಗ್ಯ, ಪೌಷ್ಠಿಕಾಂಶ, ಪೋಷಣೆ, ಶಿಕ್ಷಣ, ವಸತಿ, ರಕ್ಷಣೆ, ಮನೋಸಾಮಾಜಿಕ ಬೆಂಬಲ, ನಿಂದನೆ ಮತ್ತು ಶೋಷಣೆ ಮುಕ್ತ ವಾತಾವರಣ ಕಲ್ಪಿಸುವುದು ಮಕ್ಕಳ ಹಕ್ಕುಗಳ ಪ್ರಮುಖ ತತ್ವವಾಗಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 34ರ ಪ್ರಕಾರ 18 ವರ್ಷದ ತನಕ ಯಾವುದೇ ಮಗು ಲೈಂಗಿಕ ದೌರ್ಜನ್ಯ, ಹಿಂಸೆ, ಕಿರುಕುಳ ಅನುಭವಕ್ಕೆ ಒಳಗಾಗಬಾರದು ಎಂದು ಹೇಳಿದೆ.
ಜವಾಬ್ದಾರಿ ಹೊತ್ತವರು:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಚೈಲ್ಡ್ ಹೆಲ್ಪ್ ಲೈನ್ 1098, ಶಾಲಾ ಮಕ್ಕಳ ರಕ್ಷಣಾ ಸಮಿತಿ, ವಿದ್ಯಾರ್ಥಿ ನಿಲಯಗಳ ಮಕ್ಕಳ ರಕ್ಷಣಾ ಸಮಿತಿ, ಸ್ಥಳೀಯ ಪೊಲೀಸ್ ಠಾಣೆಗಳ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಮಕ್ಕಳ ಪರವಾಗಿ ಪಂಚಾಯಿತಿಗಳ ಮಕ್ಕಳ ಸಮಿತಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ರಾಜ್ಯ ಮಕ್ಕಳ ರಕ್ಷಣಾ ಆಯೋಗ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳೊಂದಿಗೆ ಪೊಲೀಸರು ನಡೆಸುವ ತೆರೆದ ಮನೆ ಕಾರ್ಯಕ್ರಮ ನಡೆಯುತ್ತಿವೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾತ್ರವಲ್ಲದೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ಇದೆ. ಇವೆಲ್ಲವುಗಳ ಪರಿಣಾಕಾರಿ ಕಾರ್ಯ ನಿರ್ವಹಣೆಯಿಂದ ಮಾತ್ರ ಪೋಕ್ಸೋ ಕೇಸ್‌ಗಳನ್ನು ತಗ್ಗಿಸಲು ಸಾಧ್ಯ.
"

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಮತ್ತು ಪೋಕ್ಸೋ ಪ್ರಕರಣದ ಕುರಿತು ಅರಿವು ಮೂಡಿಸಲಾಗುತ್ತಿದೆ. ಶಾಲೆ-ಕಾಲೇಜುಗಳು ರಜೆ ಇರುವುದರಿಂದ ಪ್ರವಾಸಿ ತಾಣಗಳನ್ನು ಗುರುತಿಸಿ ಅಲ್ಲಿ ಜಾಗೃತಿ ಮೂಡಿಸಲಾಗುವುದು.

— ಮಂಜುಳಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ, ಚಾಮರಾಜನಗರ

"

ಹದಿಹರೆಯದ ವಯಸ್ಸಿನಲ್ಲಿ ಮಕ್ಕಗಳ ಭಾವನೆಗಳನ್ನು ಪಾಲಕರು ಸೂಕ್ಷ್ಮವಾಗಿ ಗ್ರಹಿಸಬೇಕು. ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣದ ಪ್ರಭಾವ ಪ್ರೀತಿ, ಪ್ರೇಮಕ್ಕೆ ದೂಡುತ್ತದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಲವ್ ಕೇಸ್‌ಗಳು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕಾನೂನು ಅರಿವು ಮೂಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net