ಕಷ್ಟಗಳ ನಿವಾರಕ ಶನೈಶ್ಚರಸ್ವಾಮಿ

ಶಿರಗೋಡು ಗ್ರಾಮದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇಗುಲದ ಹೊರನೋಟ.
ಶಿರಗೋಡು ಗ್ರಾಮದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇಗುಲದ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಶಿರಗೋಡು ಗ್ರಾಮದಲ್ಲಿರುವ ದೇಗುಲ
  • ಭಕ್ತರ ನೆಚ್ಚಿನ ಶ್ರದ್ಧಾ ಕೇಂದ್ರ
ಹನೂರು: ಸಂತಾನ ಭಾಗ್ಯ ಪ್ರಾಪ್ತಿ...ಮಾಟ ಮಂತ್ರಗಳ ದೋಷ...ಕಷ್ಟ ಕಾರ್ಪಣ್ಯಗಳು... ಹೀಗೆ ಭಕ್ತರ ಹಲವು ಸಮಸ್ಯೆಗಳ ನಿವಾರಿಸುವ ದೈವಶಕ್ತಿಯ ಕೇಂದ್ರವಾಗಿ ಈ ದೇಗುಲ ಹೆಸರುವಾಸಿಯಾಗಿದೆ.
ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಶಿರಗೋಡು ಗ್ರಾಮದಲ್ಲಿರುವ ಶನೈಶ್ಚರಸ್ವಾಮಿ ದೇಗುಲ ಭಕ್ತರ ನೆಚ್ಚಿನ ಶ್ರದ್ಧಾ ಕೇಂದ್ರವಾಗುವ ಮೂಲಕ ಸ್ಥಳೀಯವಾಗಿ ಮನೆ ಮಾತಾಗಿದೆ. 55 ವರ್ಷಗಳ ಹಿಂದೆ ನಿರ್ಮಿತವಾದ ಈ ದೇಗುಲ ಗ್ರಾಮದ ಮೊದಲನೇ ದೇಗುಲವಾಗಿದ್ದು, ಶ್ರೀ ಶನೈಶ್ಚರಸ್ವಾಮಿ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಲೊಕ್ಕನಹಳ್ಳಿ ಗ್ರಾಮದ ಮಾದೇಗೌಡ ವಂಶಸ್ಥರು ಮೂರು ತಲೆಮಾರಿನಿಂದ ದೇವರಿಗೆ ಪೂಜೆ ಸಲ್ಲಿಸುತ್ತ ಬಂದಿದ್ದು, ಭಕ್ತರ ಕಷ್ಟವನ್ನು ನಿವಾರಿಸುವ ಶಕ್ತಿ ಸ್ಥಳವಾಗಿ ಮಾರ್ಪಟ್ಟಿದೆ.
ದೇಗುಲದ ಹಿನ್ನೆಲೆ
55 ವರ್ಷದ ಹಿಂದೆ ಲೊಕ್ಕನಹಳ್ಳಿ ಗ್ರಾಮದ ಮಾದೇಗೌಡರು ಕಷ್ಟದಲ್ಲಿದ್ದ ವೇಳೆ ಶಿರಗೋಡು ಗ್ರಾಮದಲ್ಲಿ ಗುಡಿಯನ್ನು ಕಟ್ಟಿಸಿ ಪೂಜೆಸುವಂತೆ ದೈವವಾಣಿಯೊಂದು ಸಂದೇಶ ನೀಡಿತು ಎನ್ನಲಾಗಿದೆ. ಈ ದಿಸೆಯಲ್ಲಿ ಮಾದೇಗೌಡರು ಶಿರಗೋಡಿನಲ್ಲಿ 4 ಎಕರೆ ಜಮೀನು ಖರೀದಿಸಿದರು. ಈ ವೇಳೆ ಹುತ್ತ ಉದ್ಭವವಾಗಿ ಇಲ್ಲಿಯೇ ಶನೈಶ್ಚರಸ್ವಾಮಿ ಮೂರ್ತಿಯನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿ ಪೂಜಿಸುವಂತೆ ದೈವವಾಣಿ ತಿಳಿಸಿತು ಎನ್ನಲಾಗಿದೆ. ಬಳಿಕ ಭಕ್ತರ ನೆರವಿನೊಂದಿಗೆ ಹೆಂಚಿನ ಮನೆಯಿಂದ ನಿರ್ಮಿತವಾದ ಈ ದೇಗುಲ ಇದೀಗ ಕಟ್ಟಡ ರೂಪ ಪಡೆದುಕೊಂಡಿದೆ. ಮಾದೇಗೌಡರು ಕಾಲವಾದ ನಂತರ ಪುತ್ರ ವೀರೇಗೌಡ, ಅವರಾದ ಬಳಿಕ ಪುತ್ರ ಮಹದೇವ ಅವರು ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ಕಷ್ಟ ಎಂದು ಬರುವ ಭಕ್ತರಿಗೆ ಆಸರೆಯಾಗುವ ಮೂಲಕ ಆರಾಧ್ಯ ದೈವವಾಗಿ ನೆಲೆ ನಿಂತಿದೆ.
ಮಹಾ ಶಿವರಾತ್ರಿಯಲ್ಲಿ 3 ದಿನ ಹಬ್ಬ
ಈ ದೇಗುಲದಲ್ಲಿ ಪ್ರತಿ ಶನಿವಾರ, ಸೋಮವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಮಹಾ ಶಿವರಾತ್ರಿ ವೇಳೆ 3 ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಮೊದಲನೇ ದಿನ ದೇಗುಲದಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 2ನೇ ದಿನ ಹೆಣ್ಣು ಮಕ್ಕಳಿಂದ ಹಾಲರವಿ ಉತ್ಸವದೊಂದಿಗೆ ಸ್ವಾಮಿಗೆ ಮಜ್ಜನ ಸೇವೆ ನೆರವೇರಿಸಲಾಗುತ್ತದೆ. ಮೂರನೇ ದಿನ ಸ್ವಾಮಿಗೆ ಎಣ್ಣೆಮಜ್ಜನೆ ಸೇವೆ ನಡೆಯುತ್ತದೆ. ಆಯುಧಪೂಜೆ ದಿನದಂದು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯನ್ನು ಸಮೀಪದ ಬನ್ನಿಮರಕ್ಕೆ ಕೊಂಡೋಯ್ದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ದೇಗುಲದಲ್ಲಿ ಶನೈಶ್ಚರ ಸ್ವಾಮಿ ಜತೆಗೆ ಶ್ರೀ ಮಹದೇಶ್ವರರ ಸ್ವರೂಪಿಯಾದ ಲಿಂಗಮೂರ್ತಿಯನ್ನು ಪೂಜಿಸುತ್ತಿರುವುದು ಮತ್ತೊಂದು ವಿಶೇಷತೆ. ಪ್ರತಿ ತಿಂಗಳು ಅಮಾವಾಸ್ಯೆಯಲ್ಲಿ ಎಣ್ಣೆಮಜ್ಜನ ಸೇವೆ ನೆರವೇರಿಸಲಾಗುತ್ತದೆ.
ಕಷ್ಟ ನಿವಾರಿಸುವ ಶಕ್ತಿ ಕೇಂದ್ರ
ಈ ದೇಗುಲದಲ್ಲಿ ಶನೈಶ್ಚರಸ್ವಾಮಿ ಮೂರ್ತಿ ಒಳಗೊಂಡಂತೆ ಲಿಂಗಮೂರ್ತಿ, ನವಗ್ರಹ, ಮುರುಗ ಹಾಗೂ ವಿಘ್ನೇಶ್ವರ ಮೂರ್ತಿಯನ್ನು ಪೂಜಿಸಲಾಗುತ್ತಿದೆ. ಮಕ್ಕಳಾಗದವರು, ಮಾಟ ಮಂತ್ರದ ದೋಷಕ್ಕೆ ಒಳಗಾದವರು, ವ್ಯಾಪಾರ, ಕೃಷಿಯಲ್ಲಿ ನಷ್ಟ ಹಾಗೂ ಕುಟುಂಬದಲ್ಲಿ ಕಷ್ಟ ಎದುರಿಸುತ್ತಿರುವರರ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಕೋರಿಕೆ ಸಲ್ಲಿಸಿದರೆ ಕಷ್ಟ ನಿವಾರಣೆಯಾಗುತ್ತದೆ ಎಂಬುದು ಭಕ್ತರ ಮನದಲ್ಲಿದ್ದು, ಅದರಂತೆಯೇ ನಡೆಯುತ್ತಿದೆ. ಹಾಗಾಗಿ ಈ ದೇಗುಲಕ್ಕೆ ಹನೂರು ಭಾಗದ ಭಕ್ತರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ತಮಿಳುನಾಡಿನ ತಿರುಪೂರ್, ಕೊಯಮತ್ತೂರು, ಸತ್ತಿ ಹಾಗೂ ಈರೋಡ್‌ನಿಂದ ಆಗಮಿಸುತ್ತಾರೆ. ಅಂತೆಯೇ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಮನದಲ್ಲಿ ಅಂದುಕೊಂಡ ಆಶಯ ಈಡೇರಿದೊಡನೆ ಆಗಮಿಸುವ ಭಕ್ತರು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ಮುಂಭಾಗದಲ್ಲಿನ ಅರಳಿ ಹಾಗೂ ಬೇವಿನಮರಕ್ಕೆ ಪೂಜೆ ನೆರವೇರಿಸುವ ಕಾರ್ಯ ಇಂದಿಗೂ ಮುಂದುವರಿದಿದೆ. ಹಾಗಾಗಿ ಈ ದೇಗುಲ ಪ್ರಸಿದ್ಧಿ ಪಡೆದುಕೊಂಡಿದೆ.
ಭಕ್ತರಿಂದಲೇ ನಿರ್ಮಿತ
ಮೂರು ತಲೆಮಾರಿನಿಂದ ಪೂಜಿಸಲ್ಪಡುತ್ತಿರುವ ಹೆಂಚಿನ ಮನೆಯಿಂದ ಕೂಡಿದ ಈ ದೇಗುಲವನ್ನು ಭಕ್ತರೇ ನಿರ್ಮಿಸಿದ್ದಾರೆ. ಆ ಮೂಲಕ ದೇಗುಲದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಸೋಮವಾರ ಭಕ್ತರ ನೆರವಿನಿಂದ ದೇಗುಲದಲ್ಲಿ ದಾಸೋಹ ನಡೆಸಿಕೊಂಡು ಬರಲಾಗುತ್ತಿದೆ. ಹರಕೆ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಿರುವುದು ದೇಗುಲದ ಅಭಿವೃದ್ಧಿಗೆ ಸಹಕಾರಿಯಾಗಿದೆ.
ಈ ದೇಗುಲವನ್ನು 55 ವರ್ಷದ ಹಿಂದೆ ನಿರ್ಮಿಸಲಾಗಿದ್ದು, ಇಲ್ಲಿ ನಾನು ಕಳೆದ 5 ವರ್ಷದಿಂದಲೂ ಪೂಜಾ ಕೈಂಕರ್ಯ ನೆರವೇರಿಸಿಸುತ್ತಿದ್ದೇನೆ. ಮಕ್ಕಳು ಇಲ್ಲದವರು, ಮಾಟ ಮಂತ್ರದ ದೋಷಕ್ಕೆ ಒಳಗಾದವರು ಹಾಗೂ ಜೀವನದಲ್ಲಿ ಕಷ್ಟಕ್ಕೆ ಸಿಲುಕಿದ ಹೆಚ್ಚಿನ ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಿದ್ದು, ಕಷ್ಟ ನಿವಾರಣೆಯಾಗುತ್ತಿದೆ. ಭಕ್ತರು ದೇಗುಲದ ಅಭಿವೃದ್ಧಿ ಹಾಗೂ ಅನ್ನ ದಾಸೋಹಕ್ಕೆ ಸಹಕಾರ ನೀಡುತ್ತಿರುವುದು ಮತ್ತೊಂದು ವಿಶೇಷ
ಮಹದೇವ, ಅರ್ಚಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net