ಅನಧಿಕೃತ ರೆಸಾರ್ಟ್, ಹೋಂಸ್ಟೇಗಳನ್ನು ಪತ್ತೆ ಮಾಡಿ

ಕೊಳ್ಳೇಗಾಲದ ಎಚ್.ನಾಗಪ್ಪ ಬಡಾವಣೆಗೆ ಡಿಸಿ ಶ್ರೀರೂಪಾ ಭೇಟಿ ನೀಡಿ ಪರಿಶೀಲಿಸಿದರು. ದಿನೇಶ್ ಕುಮಾರ್ ಮೀನಾ, ಎಂ.ಧರ್ಮೇಂದ್ರ, ಬಸವರಾಜು, ರುದ್ರಮ್ಮ ಶರಣಯ್ಯ, ನಟರಾಜು ಇತರರಿದ್ದರು.
ಕೊಳ್ಳೇಗಾಲದ ಎಚ್.ನಾಗಪ್ಪ ಬಡಾವಣೆಗೆ ಡಿಸಿ ಶ್ರೀರೂಪಾ ಭೇಟಿ ನೀಡಿ ಪರಿಶೀಲಿಸಿದರು. ದಿನೇಶ್ ಕುಮಾರ್ ಮೀನಾ, ಎಂ.ಧರ್ಮೇಂದ್ರ, ಬಸವರಾಜು, ರುದ್ರಮ್ಮ ಶರಣಯ್ಯ, ನಟರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ
ಕೊಳ್ಳೇಗಾಲ: ತಾಲೂಕಿನ ವ್ಯಾಪ್ತಿಯಲ್ಲಿ ತಲೆಎತ್ತಿರುವ ಅನಧಿಕೃತ ರೆಸಾರ್ಟ್, ಹೋಂಸ್ಟೇಗಳನ್ನು ಪತ್ತೆ ಹಚ್ಚಿ ನೋಟಿಸ್ ನೀಡುವ ಮೂಲಕ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ ನೀಡಿದರು.
ಪಟ್ಟಣದ ಎಚ್.ನಾಗಪ್ಪ ಬಡಾವಣೆಗೆ ಯುಜಿಡಿ ಸಂಪರ್ಕವಿಲ್ಲದೆ ಉಂಟಾಗಿರುವ ಸಮಸ್ಯೆಯನ್ನು ಸೋಮವಾರ ಖುದ್ದು ಪರಿಶೀಲಿಸಿದ ಬಳಿಕ ಮಧುವನಹಳ್ಳಿ ಸಮೀಪದ ಹರವನಪುರ (ಲಕ್ಷ್ಮೀಪುರ) ವ್ಯಾಪ್ತಿಗೆ ಬರುವ ತೋಟದ ಮನೆಯೊಂದರಲ್ಲಿ ಏ.4ರ ರಾತ್ರಿ ಬೆಂಗಳೂರು ಮೂಲದ ರೌಡಿಶೀಟರ್ ಹುಟ್ಟುಹಬ್ಬದ ಅಂಗವಾಗಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಅಕ್ರಮ ರೆಸಾರ್ಟ್, ಹೋಂಸ್ಟೇಗಳನ್ನು ಮುಚ್ಚಿಸಬೇಕು. ತಹಸೀಲ್ದಾರ್, ಉಪವಿಭಾಗಧಿಕಾರಿ ಪರಿಶೀಲಿಸಿ ನೋಟಿಸ್ ನೀಡಿ ಕ್ರಮವಹಿಸಬೇಕು ಎಂದು ಖಡಕ್ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಎಂ.ಧರ್ಮೇಂದ್ರ, ಗಸ್ತು ಸಿಬ್ಬಂದಿ ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೆ ನಿಗಾವಹಿಸಲಾಗಿದೆ ಎಂದರು.
ಗುಂಡ್ಲುಪೇಟೆ ತಾಲೂಕಿನಲ್ಲಿ ಒಟ್ಟು 22 ಅನಧಿಕೃತ ಹೋಂಸ್ಟೇ, ರೆಸಾರ್ಟ್‌ಗಳಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 2 ಅನ್ನು ಮುಚ್ಚಿಸಿದ್ದೇವೆ. ಅಂತೆಯೇ, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಕ್ರಮವಹಿಸಲಾಗುತ್ತದೆ ಎಂದು ನಂತರ ಡಿಸಿ ಶ್ರೀರೂಪಾ ಹೇಳಿದರು.
ನಗರಸಭೆ ಇ-ಸ್ವತ್ತು ವಿಳಂಬ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದರಲ್ಲದೆ, ಕೊಳ್ಳೇಗಾಲ ನಗರಸಭೆಯಲ್ಲಿ ಇ-ಸ್ವತ್ತು ಬಾಕಿ ಉಳಿಯಬಾರದು. 7 ದಿನದ ಅವಧಿಯಲ್ಲಿ ಅರ್ಜಿದಾರರಿಗೆ ಇ-ಸ್ವತ್ತು ನೀಡಬೇಕು. ನವೀಕರಣ, ತಿದ್ದುಪಡಿ ಕೆಲಸಗಳನ್ನು ಜರೂರಾಗಿ ಆಗಬೇಕು. ಒಂದು ವೇಳೆ ಅರ್ಜಿದಾರರು ನೀಡಿದ ದಾಖಲೆಗಳಲ್ಲಿ ಸಮಸ್ಯೆ ಇದ್ದರೆ ಹಿಂಬರಹ ನೀಡಬೇಕು. ಎಸಿ ದಿನೇಶ್ ಕುಮಾರ್ ಮೀನಾ ಅವರು ಇ-ಸ್ವತ್ತು ವಿಲೇವಾರಿ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಪ್ರತಿ ವಾರ ನಗರಸಭೆಗೆ ಭೇಟಿ ನೀಡಿ ನಡೆಸಬೇಕು. ಸರ್ಕಾರಿ ಕಚೇರಿಯಲ್ಲಿ ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಆಗಬೇಕು ಎಂದರು.
25 ವರ್ಷಗಳ ಸಮಸ್ಯೆ: ಪಟ್ಟಣದ ನ್ಯಾಯಾಲಯ ಮುಖ್ಯ ರಸ್ತೆಯಲ್ಲಿರುವ ಎಚ್.ನಾಗಪ್ಪ ಬಡಾವಣೆ, ಪೊಲೀಸ್ ಕ್ವಾರ್ಟರ್ಸ್ ಹಾಗೂ ಅರಣ್ಯ ಇಲಾಖೆ ಕ್ವಾರ್ಟರ್ಸ್‌ನಲ್ಲಿ ಯುಜಿಡಿ ಸಂಪರ್ಕವಿಲ್ಲದೆ ಸಮಸ್ಯೆ ಆಗಿರುವ ಬಗ್ಗೆ ನಗರಸಭೆ ಅಧಿಕಾರಿಗಳಿಂದ ಡಿಸಿ ಮಾಹಿತಿ ಪಡೆದರು. 25 ವರ್ಷದಿಂದ ಈ ಬಡಾವಣೆಯಲ್ಲಿ ವಾಸವಿದ್ದೇವೆ. ಶೌಚಗೃಹ ನೀರಿಗೆ ಯುಜಿಡಿ ಸಂಪರ್ಕವಿಲ್ಲ. ನಗರಸಭೆಯಿಂದ ರಸ್ತೆ ಮಾಡಲಾಗಿದೆ. ಮುಂದೆ ಹೋಗಲು ಸ್ಥಳವಿಲ್ಲದೆ ಕಲುಷಿತ ನೀರು ಬಡಾವಣೆಯಲ್ಲಿಯೇ ಉಳಿಯುತ್ತಿದೆ. ಗಬ್ಬು ನಾರುವ ವಾತಾವರಣದಲ್ಲಿಯೇ ಜೀವಿಸುತ್ತಿದ್ದೇವೆ ಎಂದು ಎಚ್.ನಾಗಪ್ಪ ಬಡಾವಣೆ ನಿವಾಸಿ ರಾಚಪ್ಪ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಶ್ರೀರೂಪಾ, ಪೊಲೀಸ್, ಅರಣ್ಯ ಇಲಾಖೆ ಕ್ವಾರ್ಟರ್ಸ್, ನಾಗಪ್ಪ ಬಡಾವಣೆ ಮನೆಗಳ ಶೌಚಗೃಹ, ಚರಂಡಿ ನೀರು ಹೊರ ಹೋಗುವಂತೆ ಪೈಪ್‌ಲೈನ್ ಕಾಮಗಾರಿ, ಯುಜಿಡಿ ಕಾಮಗಾರಿ ನಡೆಸಲು ಯೋಜನೆ ರೂಪಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಿದರು.
ವಿವಿಧೆಡೆ ಭೇಟಿ: ಪಟ್ಟಣ ವ್ಯಾಪಿಯಲ್ಲಿ ನಿರ್ಮಿತಿ ಕೇಂದ್ರ ವತಿಯಿಂದ ನಡೆಸಿರುವ ಸಿಸಿ ರಸ್ತೆಗಳು, ಹರಳೆ ಗ್ರಾಮದ ದುರ್ಗಮ ದೇವಾಲಯ, ಕಟ್ಟಡಗಳು, ಮುಡಿಗುಂಡ ಸೇತುವೆಯನ್ನು ಜಿಲ್ಲಾಧಿಕಾರಿ ಶ್ರೀರೂಪಾ ಪರಿಶೀಲನೆ ನಡೆಸಿದರು.
ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಡಿವೈಎಸ್ಪಿ ಎಂ.ಧರ್ಮೇಂದ್ರ, ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ, ಆರ್.ಐ ನಿರಂಜನ್, ನಗರಸಭೆ ಎಇಇ ನಟರಾಜು, ನಿರ್ಮಿತಿ ಕೇಂದ್ರದ ಇಂಜಿನಿಯರ್ ಪ್ರತಾಪ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net