ಯುವಪೀಳಿಗೆ ಭವಿಷ್ಯಕ್ಕೆ ಗ್ರಂಥಾಲಯ ಸಹಕಾರಿ

ಹನೂರಿನ ಶಾಸಕರ ನಿವಾಸದಲ್ಲಿ ಆಯೋಜಿಸಿದ್ಧ ಮನೆಗೊಂಡು ಗ್ರಂಥಾಲಯ ಕಾರ್ಯಕ್ರಮಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭಿತ್ತಿಪತ್ರ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು. ಡಾ.ಮಾನಸ, ಡಾ. ಶಿವರಾಜಪ್ಪ, ಅಂಶಿ ಪ್ರಸನ್ನಕುಮಾರ್ ಇತರರಿದ್ದರು.
ಹನೂರಿನ ಶಾಸಕರ ನಿವಾಸದಲ್ಲಿ ಆಯೋಜಿಸಿದ್ಧ ಮನೆಗೊಂಡು ಗ್ರಂಥಾಲಯ ಕಾರ್ಯಕ್ರಮಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭಿತ್ತಿಪತ್ರ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು. ಡಾ.ಮಾನಸ, ಡಾ. ಶಿವರಾಜಪ್ಪ, ಅಂಶಿ ಪ್ರಸನ್ನಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯ
ಹನೂರು: ಮನೆಗೊಂದು ಗ್ರಂಥಾಲಯದಲ್ಲಿ ಸಾಧಕರ ಆತ್ಮಚರಿತ್ರೆ ಪುಸ್ತಕ ಹೆಚ್ಚಿರಬೇಕು. ಇದು ಯುವ ಪೀಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಶನಿವಾರ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ, ಜನಪರ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಹಾಗೂ ಮನೆ ಮನೆ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಹಿಂದೆ ಹಿರಿಯರು ಭಕ್ತಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಆದ್ಯತೆ ನೀಡಬೇಕಿರುವುದು ಅಗತ್ಯವಾಗಿದೆ. ಇದಕ್ಕೆ ಗ್ರಂಥಾಲಯಗಳು ಸಹಕಾರಿಯಾಗಿವೆ. ಸಾಧಕರ ಜೀವನ ಚರಿತ್ರೆಯ ಪುಸ್ತಕಗಳು ಯುವ ಪೀಳಿಗೆ ಸ್ಫೂರ್ತಿಯಾಗಿವೆ. ಈ ಬಾರಿಯ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡಿನ ಕವಿಗಳು, ಬಸವಾದಿ ಶರಣರು ಹಾಗೂ ಸಾಧಕರ ಭಾವಚಿತ್ರಗಳನ್ನು ಗ್ರಂಥಾಲಯಗಳಲ್ಲಿ ಅಳವಡಿಸುವಂತೆ ಸೂಚಿಸಲಾಗಿದೆ. ಇದು ಯುವಕರಲ್ಲಿ ಓದುವ ಹವ್ಯಾಸ ಬೆಳೆಸುತ್ತದೆ. ಈ ದೆಸೆಯಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಿಂದ ಆರಂಭವಾದ ಈ ಕಾರ್ಯಕ್ರಮ ಹನೂರಿನ ಶಾಸಕರ ಮನೆಗೆ ಆಗಮಿಸಿರುವುದು ಉತ್ತಮ ಬೆಳವಣಿಗೆ. ಇದು ಯುವ ಪೀಳಿಗೆಗೆ ಸಂದೇಶ ರವಾನಿಸಿದಂತಾಗಿದೆ. ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಶಾಸಕರು ಹನೂರಿನಲ್ಲಿ ತಂತ್ರಜ್ಞಾನ ವ್ಯವಸ್ಥೆಯನ್ನು ಒಳಗೊಂಡಂತೆ 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರಕ್ಕೆ ಮಾದರಿಯಾದ ವಿನೂತನ ಗ್ರಂಥಾಲಯದ ರೂಪುರೇಷದ ವಿಡಿಯೋ ತುಣುಕನ್ನು ಪ್ರದರ್ಶಿಸಿದರು. ನೆರೆದಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಪ್ರೊ ಶಿವರಾಜಪ್ಪ ಮಾತನಾಡಿ, ಯಾವ ದೇಶ ಸಾಹಿತ್ಯ ಹಾಗೂ ಸಂಸ್ಕೃತಿ ಭವ್ಯತೆಯನ್ನು ಸಾರುವುದಿಲ್ಲವೋ ಆ ದೇಶ ಬೇಗ ನಾಶವಾಗುತ್ತದೆ. ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪಸರಿಸುವಲ್ಲಿ ದೇಶ ಮುಂದಿದೆ. ಗಡಿಯಿಂದ ಕೂಡಿರುವ ಹನೂರು ಭಾಗವು ಶ್ರೀ ಮಲೆಮಹದೇಶ್ವರರು, ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ಪಾದಸ್ಪರ್ಶಿ ಸ್ಥಳವಾಗಿದ್ದು, ಇಲ್ಲಿ ಸಾಹಿತ್ಯದ ಸೆಲೆ ಜೀವಂತವಾಗಿದೆ. ಜನಪದ ಸಾಹಿತ್ಯ ಹಾಸು ಹೊಕ್ಕಾಗಿದೆ ಎಂದರು.
ಇದಕ್ಕೂ ಮುನ್ನಾ ಡಾ. ಪ್ರೇಮಾ, ಸದಾನಂದ, ಕಂದವೇಲು, ಪ್ರೇಮ ಸಿದ್ದಯ್ಯನಪುರ ಹಾಗೂ ವಿಜಯ ಕವನ ವಾಚಿಸಿದರು.
ವಿದ್ಯಾರ್ಥಿ ಮಿತ್ರ ಪತ್ರಿಕೆ ಬಗ್ಗೆ ಮೆಚ್ಚುಗೆ: ಸಿದ್ದಯ್ಯನಪುರದ ಶಿಕ್ಷಕಿ ಪ್ರೇಮಾ ಮಾತನಾಡಿ, ವಿಜಯವಾಣಿಯ ವಿದ್ಯಾರ್ಥಿ ಮಿತ್ರ ಪತ್ರಿಕೆಯು ಉತ್ತಮವಾಗಿದ್ದು, ಪಠ್ಯದ ವಿಷಯ ಸೇರಿದಂತೆ ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಜತೆಗೆ ಮಕ್ಕಳಲ್ಲಿ ಓದುವ ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡುವ ಹವ್ಯಾಸ ಬೆಳೆಸುತ್ತದೆ. ಆದ್ದರಿಂದ ಈ ಪತ್ರಿಕೆ ಸರ್ಕಾರಿ ಶಾಲೆಗಳಿಗೆ ನೀಡಿದರೆ ಅನುಕೂಲವಾಗುತ್ತದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜನಪರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ ಮಹೇಶ ಚಿಕ್ಕಲ್ಲೂರು, ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net