ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ
ಸುಗ್ಗಿ ಹಬ್ಬ ಕಾರ್ಯಕ್ರಮ
ಹನೂರು: ತಾಲೂಕಿನ ಕಾಡಂಚಿನ ಗ್ರಾಮ ತುಳಸಿಕೆರೆ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸುಗ್ಗಿ ಹಬ್ಬ ಕಾರ್ಯಕ್ರಮದಲ್ಲಿ ರೈತರಿಂದ ಸಿರಿಧಾನ್ಯಗಳು ಮೇಳೈಸಿದ್ದವು. ಆಗಮಿಸಿದ್ದ ಗಣ್ಯರು ಖಾದ್ಯದ ಸವಿಯನ್ನು ಸವಿದರು.
ಹಿಂದೆ ಗ್ರಾಮೀಣ ಭಾಗದಲ್ಲಿನ ರೈತರು ವರ್ಷಕ್ಕೊಮ್ಮೆ ಒಂದು ಬೆಳೆಯನ್ನು ಮಾತ್ರ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಯ ವೇಳೆ ಮನೆಮಂದಿಯೆಲ್ಲಾ ಭಾಗವಹಿಸುತ್ತಿದ್ದರು. ಸೋಬಾನೆ, ಜನಪದ ಹಾಗೂ ಇನ್ನಿತರೆ ಗ್ರಾಮೀಣ ಸೊಗಡಿನ ಹಾಡುಗಳನ್ನು ಹಾಡುತ್ತಾ ಬೆಳದಿದ್ದ ರಾಗಿ, ಸಾಮೆ, ಹಾರಕ ಹಾಗೂ ಇನ್ನಿತರೆ ಸಿರಿಧಾನ್ಯಗಳನ್ನು ಕಟಾವು ಮಾಡುತ್ತಿದ್ದರು. ಹೊಲದಲ್ಲಿ ಕಣ ನಿರ್ಮಿಸಿ ರೈತರು ಸ್ವತಃ ಭಾಗಿಯಾಗಿ ಎತ್ತುಗಳನ್ನು ಬಳಸಿಕೊಂಡು ಒಕ್ಕಣೆ ಮಾಡಿ ಕಣದಲ್ಲೇ ರಾಶಿ ಹಾಕಿ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬ ಆಚರಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ಗ್ರಾಮೀಣ ಸೊಗಡಿನ ಹಬ್ಬ ನಶಿಸಿದೆ. ಈ ದಿಸೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಅವರ ನೇತೃತ್ವದಲ್ಲಿ ಮ.ಬೆಟ್ಟ ತಪ್ಪಲಿನ ತುಳಸಿಕೆರೆ ಗ್ರಾಮದಲ್ಲಿ ಸುಗ್ಗಿ ಹಬ್ಬವನ್ನು ಆಚರಿಸುವುದರ ಮೂಲಕ ರೈತರಲ್ಲಿ ಹಳೆ ಕಾಲದ ಕೃಷಿ ಪದ್ಧತಿಯನ್ನು ನೆನಪಿಸಿಕೊಟ್ಟಿ ಮುಂದುವರಿಸುವಂತೆ ತಿಳಿಸಿ ಕೊಟ್ಟರು.
ಸುಗ್ಗಿ ಹಬ್ಬದ ಹಿನ್ನಲೆ ಗ್ರಾಮವನ್ನು ತಳೀರು ತೋರಣದಿಂದ ಸಿಂಗರಿಸಲಾಗಿತ್ತು. ರೈತರು ಬೆಳೆದಿದ್ದ ನವಣೆ, ಸಾಮೆ, ರಾಗಿ ಭತ್ತ, ಸಾಸಿವೆ, ಅವರೆ ಹಾಗೂ ಇನ್ನಿತರೆ ಸಿರಿಧಾನ್ಯಗಳನ್ನು ರಾಶಿ ಹಾಕಿ ಪೂಜೆ ಸಲ್ಲಿಸಿದರು. ಜತೆಗೆ ಆಗಮಿಸಿದ ಗಣ್ಯರಿಗೆ ಸಿರಿಧಾನ್ಯಗಳಿಂದ ತಯಾರಿಸಿದ್ದ ಖಾದ್ಯವನ್ನು ಉಣ ಬಡಿಸಲಾಯಿತು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಬೆಳೆಯುವುದು ಕ್ಷೀಣಿಸಿರಬಹುದು, ಆದರೆ ಮ.ಬೆಟ್ಟದ ಭಾಗದಲ್ಲಿನ ರೈತರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಮೌಲ್ಯವರ್ದಿತ ಆಹಾರ ಧಾನ್ಯಗಳಾಗಿವೆ. ಹಾಗಾಗಿ ಈ ಭಾಗಕ್ಕೆ ಸೂಕ್ತ ಮಾರುಕಟ್ಟೆ ಅಗತ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ರೂಪಾ ಮಾತನಾಡಿ, ಗ್ರಾಮೀಣ ಸೊಗಡಿನ ಸುಗ್ಗಿ ಹಬ್ಬವನ್ನು ಆಚರಿಸುತ್ತಿರುವುದು ಹಿಂದಿನ ಕಾಲದ ಹಬ್ಬವನ್ನು ಮರುಕಳುಹಿಸುವಂತೆ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಇನ್ನು ಕಾಡಂಚಿನ ಗ್ರಾಮಗಳಿಗೆ ಕುಡಿಯುವ ನೀರು, ಸಮರ್ಪಕ ರಸ್ತೆ, ವಿದ್ಯುತ್ ಹಾಗೂ ಇನ್ನಿತರೆ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಲು ಕ್ರಮವಹಿಸುವುದಾಗಿ ಭರಸವೆ ನೀಡಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ. ಈ. ರಘು ಮಾತನಾಡಿ, ಈ ಭಾಗದಲ್ಲಿನ ರೈತರು ಹೆಚ್ಚಾಗಿ ಮೌಲ್ಯವರ್ದಿತ ಸಿರಿಧಾನ್ಯಗಳನ್ನು ಬೆಳೆಯುತ್ತಿರುವುದು ಮೆಚ್ಚುಗೆ ಸಂಗತಿ. ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಸಿರಿಧಾನ್ಯಗಳಖನ್ನು ಖರೀದಿಸುವುದರ ಮೂಲಕ ಉತ್ತಮ ಮಾರುಕಟ್ಟೆ ಕಲ್ಪಿಸುವುದಾಗಿ ಭರಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಮ.ಬೆಟ್ಟ ಭಾಗದ ಕಾಡಂಚಿನ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಸಿಕ್ಕಿಲ್ಲ. ಇದರಿಂದ ಇಲ್ಲಿನ ಜನರು ಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.
ಡಿಸಿಎಫ್ ಭಾಸ್ಕರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್, ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಶಶಿ, ಶಾಂತಕುಮಾರ್, ವೆಂಕಟೇಶ್, ಕೃಷ್ಣೇಗೌಡ, ಮೋಹನ್, ಮಾದಪ್ಪ ಹಾಗೂ ಇನ್ನಿತರರು ಇದ್ದರು.