ಇ-ಸ್ವತ್ತು ವಿಳಂಬ ಧೋರಣೆ ಬದಲಾಗಲಿ

ಚಾಮರಾಜನಗರ ನಗರಸಭೆ ಕಚೇರಿ
ಚಾಮರಾಜನಗರ ನಗರಸಭೆ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ಆಸ್ತಿ ದಾಖಲೆಗಾಗಿ ಸಾರ್ವಜನಿಕರ ಪರದಾಟ
  • ಅಧಿಕಾರಿಗಳ ವಿರುದ್ಧ ಹೆಚ್ಚಾದ ಆಕ್ರೋಶ
ಚಾಮರಾಜನಗರ: ಜಿಲ್ಲೆಯಲ್ಲಿ ಆಸ್ತಿ ದಾಖಲೆಗಳನ್ನು ಹೊಂದಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿಗಳು ಆಡಳಿತದ ಕೇಂದ್ರಗಳಾಗಿವೆ. ಸಾರ್ವಜನಿಕರು ಖಾತೆ ಮಾಡಿಸಿಕೊಳ್ಳುವುದು, ಇ-ಸ್ವತ್ತು ಪಡೆಯುವುದಕ್ಕಾಗಿ ಅರ್ಜಿಗಳನ್ನು ಸಲ್ಲಿಸಿ ವಿಳಂಬವಾಗುತ್ತಿರುವುದಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ನಗರಸಭೆಯಲ್ಲಿ ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕಾರ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಮತ್ತು ದಲ್ಲಾಳಿ ಲೋಕಾಯುಕ್ತರ ಬಲೆಗೆ ಬಿದ್ದರು. ನಗರಸಭೆ ಕಾರ್ಯವೈಖರಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಶ್ರೀರೂಪಾ ಖುದ್ದಾಗಿ ಭೇಟಿ ನೀಡಿದರು. ನಗರಸಭೆಯ ವಿವಿಧ ಶಾಖೆಗಳಲ್ಲಿ ಪರಿಶೀಲನೆ ನಡೆಸಿ ಬಾಕಿ ಉಳಿದಿರುವ ಕಡತಗಳ ಬಗ್ಗೆ ಪ್ರಶ್ನಿಸಿದರು. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಿದರು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ. ಸಾರ್ವಜನಿಕರು ಕೆಲಸ-ಕಾರ್ಯಗಳಿಗಾಗಿ ನೇರವಾಗಿ ಅಧಿಕಾರಿಗಳನ್ನೇ ಭೇಟಿ ಮಾಡಿ ಎಂದು ಬೋರ್ಡ್ ಹಾಕಲು ಸೂಚನೆ ನೀಡಿದರು. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಸಾರ್ವಜನಿಕರು ಆಸ್ತಿ ದಾಖಲೆಗಳನ್ನು ಹೊಂದಿಸುವುದು ಸುಲಭವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಚೇರಿಗೆ ಅಲೆಯುವ ಪರಿಸ್ಥಿತಿ ಇದೆ. ಹಲವು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಖಾತೆ ಮಾಡಿಕೊಡುವುದಿಲ್ಲ. ಸಲ್ಲಿಸಿದ ಅರ್ಜಿಯಲ್ಲಿ ಲೋಪಗಳಿದ್ದರೆ ಬೇಗ ತಿಳಿಸುವುದಿಲ್ಲ, ಕಾರಣವೇ ಇಲ್ಲದೆ ವಿಳಂಬ ಮಾಡಲಾಗುತ್ತಿದೆ, ಮಧ್ಯವರ್ತಿಗಳ ಕಡೆಯಿಂದ ಹೋದರೆ ಕೆಲಸ ಕಾರ್ಯಗಳು ಬೇಗ ಆಗುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
*ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಕೊಳ್ಳೇಗಾಲ ನಗರಸಭೆಗೆ 2025ರ ಮಾ.13ರಂದು ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದೆ. ಇಷ್ಟು ದಿನಗಳೇ ಕಳೆದರೂ ಮಾಡಿಕೊಟ್ಟಿಲ್ಲ. ಈ ವಿಳಂಬ ಧೋರಣೆಯನ್ನು ಖಂಡಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ. ನನಗಿಂತಲೂ ಮೊದಲು ಅರ್ಜಿ ಸಲ್ಲಿಸಿದವರಿಗೆ ಇ-ಸ್ವತ್ತು ಮಾಡಿಕೊಡಲಾಗಿದೆ. ಇದ ಹಿಂದೆ ಸ್ವಹಿತಾಸಕ್ತಿ ಕೆಲಸ ಮಾಡುತ್ತಿದೆ.
ಜಿ.ಸಿ.ರವಿಕುಮಾರ್, ಬೆಂಗಳೂರು
*ಅರ್ಜಿಗಳ ತ್ವರಿತ ವಿಲೇವಾರಿಯಾಗಲಿ
ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಕೊಡುತ್ತಿಲ್ಲ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಈ ವಿಳಂಬ ಧೋರಣೆಯಿಂದ ಆಡಳಿತ ವ್ಯವಸ್ಥೆಯ ಮೇಲೆ ಬೇಸರ ಮೂಡುತ್ತಿದೆ. ಆಸ್ತಿ ದಾಖಲೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸುತ್ತೇನೆ.
ದಿವ್ಯಾ, ಯಳಂದೂರು ನಿವಾಸಿ
*ಖಾತೆ ಮಾಡಿಕೊಡುತ್ತಿಲ್ಲ
ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11ನೇ ವಾರ್ಡ್ ಬಡಾವಣೆಯಲ್ಲಿ ನಮ್ಮ ನಿವೇಶನವಿದೆ. ನನ್ನ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ನನ್ನ ಹೆಸರಿಗೆ ಇ-ಸ್ವತ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಲು ಪಟ್ಟಣ ಪಂಚಾಯಿತಿ ಕಚೇರಿಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದೆ. ಇದಕ್ಕೆ ಸಂಬಂಧಪಟ್ಟ ಹಣವನ್ನೂ ಬ್ಯಾಂಕ್ ಖಾತೆಗೆ ಕಟ್ಟಿದ್ದೇನೆ. ಆದರೂ ಖಾತೆ ಮಾಡಿಕೊಡುತ್ತಿಲ್ಲ
ಬಸವರಾಜು, 11ನೇ ವಾರ್ಡ್ ನಿವಾಸಿ, ಯಳಂದೂರು
*ಕಾಯಲು ಹೇಳ್ತಿದ್ದಾರೆ
ಕಾವೇರಿ ತಂತ್ರಾಂಶದಲ್ಲಿ ಸಮಸ್ಯೆ ಎದುರಾಗಿರುವುದರಿಂದ ಇ-ಸ್ವತ್ತು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯ ಹಕ್ಕು ಪತ್ರಗಳನ್ನು ಮಾಡಲು ಸಾಧ್ಯವಾಗುತ್ತಿದ್ದು, ಕೆಲವು ದಿನಗಳವರೆಗೆ ಕಾಯುವಂತೆ ಹೇಳುತ್ತಿದ್ದಾರೆ.
ಗುರುಸ್ವಾಮಿ, ಕಗ್ಗಳದಹುಂಡಿ, ಗುಂಡ್ಲುಪೇಟೆ
*ತಾಂತ್ರಿಕ ನೆಪ ಹೇಳುವ ಗ್ರಾಪಂ
ನಮ್ಮ ಸ್ವತ್ತಿನ ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದರೂ ಗ್ರಾಮ ಪಂಚಾಯಿತಿಯು ಕಳೆದ ಎರಡು ವರ್ಷಗಳಿಂದ ತಾಂತ್ರಿಕ ನೆಪ ಹೇಳಿ ಮಾಡಿಕೊಡುತ್ತಿಲ್ಲ. ಇದರಿಂದ ನಮ್ಮ ಆಸ್ತಿಯನ್ನು ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ನನ್ನಂತೆಯೇ ಹಲವಾರು ಜನರು ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿ ಪ್ರತಿದಿನವೂ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ.
ಜಿ.ಜಿ.ಮಲ್ಲಿಕಾರ್ಜುನ, ಗೋಪಾಲಪುರ, ಗುಂಡ್ಲುಪೇಟೆ
*ಇ-ಸ್ವತ್ತು ತಿದ್ದುಪಡಿ ಮಾಡಿಕೊಡಿ
ಹನೂರು ಪಟ್ಟಣ ಪಂಚಾಯಿತಿ ವತಿಯಿಂದ ನೀಡಿರುವ ಇ-ಸ್ವತ್ತು ಲೋಪದಿಂದ ಕೂಡಿದೆ. ಇದರ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಿ ವರ್ಷವೇ ಕಳೆದಿದೆ. ಆದರೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಇದರಿಂದ ಕಚೇರಿಗೆ ಅಲೆದು ಸಾಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಿದ್ದೇನೆ. ಯಾವುದೇ ಕ್ರಮವಾಗಿಲ್ಲ. ಈಗಾಗಲಾದರೂ ಸಂಬಂಧಪಟ್ಟವರು ಇ-ಸ್ವತ್ತು ತಿದ್ದುಪಡಿ ಮಾಡಿಕೊಡಬೇಕೆಂದು ಕೋರುತ್ತೇನೆ.
ಮಹದೇವಮ್ಮ, 1ನೇ ವಾರ್ಡ್ ನಿವಾಸಿ, ಹನೂರು
*ಆಸ್ತಿ ದಾಖಲೆ ನೀಡಲು ಮೀನಾಮೇಷ
ಇ-ಸ್ವತ್ತು ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದ್ದೇನೆ. ಅಗತ್ಯ ದಾಖಲೆಗಳನ್ನೂ ನೀಡಿದ್ದೇನೆ. 6 ಸಾವಿರ ರೂ.ಕಂದಾಯ ತೆರಿಗೆ ಕಟ್ಟಿದ್ದೇನೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಿವೇಶನದ ಅಳತೆ ಮಾಡುತ್ತಿಲ್ಲ. ಇ-ಸ್ವತ್ತ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಚೇರಿಗೆ ನಿತ್ಯ ಅಲೆಯುವಂತಾಗಿದೆ. ತುಂಬಾ ತೊಂದರೆ ಅನುಭವಿಸುತ್ತಿದ್ದೇನೆ.
ಕೃಷ್ಣ, ಹನೂರು ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net