ಹನೂರಿನ ಶ್ರೀಮಲೆಮಹದೇಶ್ವರ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ಎಂ.ಆರ್.ಮಂಜುನಾಥ್, ಕೆ.ಎನ್.ಚೈತ್ರಾ, ಪ್ರತಿಭಾ, ಉಮೇಶ್ ಇತರರು ಇದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ
ಹನೂರು:
ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಹಲವು ಮಹಾನ್ ನಾಯಕರ ಶ್ರಮ ಅಪಾರ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ಪಟ್ಟಣದ ಶ್ರೀಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ವಿವಿಧ ಭಾಷೆ, ಸಂಸ್ಕೃತಿ ಹಾಗೂ ವೈವಿಧ್ಯತೆಯಲ್ಲಿ ಐಕ್ಯ ಕಾಣಲು ಸಾಧ್ಯವಾಯಿತು. ಆದ್ದರಿಂದ ಪ್ರತಿಯೊಬ್ಬರೂ ಮಹಾನ್ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶಕ್ಕೆ ಕೊಡುಗೆ ನೀಡಬೇಕು. ಯುವಕರು ದೇಶದ ದೊಡ್ಡ ಶಕ್ತಿ. ಇವರಲ್ಲಿ ದೇಶದ ಉಜ್ವಲ ಭವಿಷ್ಯ ಅಡಗಿದ್ದು, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿಗೆ ಹಿನ್ನಡೆಯಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಗಂಭಿರವಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ 10 ಕೋಟಿ ರೂ.ಅನುದಾನವನ್ನು ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಾಕಿ ಇರುವ ಕಡೆಗಳಲ್ಲಿ ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಈಗಾಗಲೇ ಕ್ರಮವಹಿಸಲಾಗಿದೆ. 490 ಕೋಟಿ ರೂ. ವೆಚ್ಚದ ಉಡುತೊರೆ ಜಲಾಶಯದ ಅನುಷ್ಠಾನಕ್ಕೆ ರೂಪುರೇಷವನ್ನು ಸಿದ್ಧಪಡಿಸಲಾಗಿದೆ. ಕ್ಷೇತ್ರದ ಬಂಡಳ್ಳಿ, ಮ.ಬೆಟ್ಟ, ಲೊಕ್ಕನಹಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚೆಗೆ 7.5 ಕೋಟಿ ರೂ.ವೆಚ್ಚದಲ್ಲಿ ಸಾರಿಗೆ ಬಸ್ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕೂ ಸದ್ಯದಲ್ಲಿಯೇ ಕಾಲ ಕೂಡಿ ಬರಲಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ತಹಸೀಲ್ದಾರ್ ಎನ್.ಕೆ.ಚೈತ್ರಾ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಪಥ ಸಂಚಲನ ನಡೆಸುವುದರ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಪಂಚಾಯಿತಿ ಇಒ ಉಮೇಶ್, ಬಿಇಒ ಬಿ.ಪ್ರತಿಭಾ, ಪಪಂ ಮುಖ್ಯಾಧಿಕಾರಿ ರೇಖಾ, ಟಿಎಚ್‌ಒ ಡಾ.ಪ್ರಕಾಶ್, ಸೆಸ್ಕ್ ಎಇಇ ರಂಗಸ್ವಾಮಿ ಇತರರು ಇದ್ದರು.