ಸರ್ಕಾರಿ ಶಾಲೆ ಮಕ್ಕಳ ಪ್ರತಿಭೆಗೆ ಮತ್ತಷ್ಟು ವೇದಿಕೆ ಸಿಗಲಿ

ಯಳಂದೂರು ತಾಲೂಕಿನ ಹೊನ್ನೂರು-ಬೀಚಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕೆಸ್ತೂರು ಕ್ಲಸ್ಟರ್ ವತಿಯಿಂದ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿದರು.
ಯಳಂದೂರು ತಾಲೂಕಿನ ಹೊನ್ನೂರು-ಬೀಚಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕೆಸ್ತೂರು ಕ್ಲಸ್ಟರ್ ವತಿಯಿಂದ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿದರು.
Published on
ಯಳಂದೂರು: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಲ್ಲಿ ಅಗಾಧ ಪ್ರತಿಭೆ ಇರುತ್ತದೆ. ಆದರೆ ಇದಕ್ಕೆ ಸೂಕ್ತ ವೇದಿಕೆ ಲಭಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಿರುತ್ತದೆ. ಹಾಗಾಗಿ ಪ್ರತಿಭಾ ಕಾರಂಜಿ ಹೊರತುಪಡಿಸಿ ಇನ್ನಷ್ಟು ವೇದಿಕೆಗಳು ಇವರಿಗೆ ಲಭಿಸಬೇಕು ಎಂದು ಹೊನ್ನೂರು ಗ್ರಾಪಂ ಅಧ್ಯಕ್ಷ ಗುರುಪ್ರಸಾದ್ ಕರೆ ನೀಡಿದರು.
ಗುರುವಾರ ತಾಲೂಕಿನ ಹೊನ್ನೂರು-ಬೀಚಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-02 ರಲ್ಲಿ ನಡೆದ ಕೆಸ್ತೂರು ಕ್ಲಸ್ಟರ್ ವತಿಯಿಂದ 2025-26ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಕ್ಕಳು ಅತ್ಯಂತ ಪ್ರತಿಭಾವಂತರಿರುತ್ತಾರೆ. ಆದರೆ ಇವರಿಗೆ ಇವರ ಆಸಕ್ತ ವಿಷಯದಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕು. ಅವರ ಅಭ್ಯಾಸಕ್ಕೆ ಅವಕಾಶಗಳು ಲಭಿಸಬೇಕು. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇವರು ಸಾಧನೆ ಮಾಡಲು ಎಲ್ಲ ರೀತಿ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮಾತನಾಡಿ, ನಮ್ಮ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕದ ಪ್ರತಿನಿಧಿಗಳಾಗಿ ಸ್ಪರ್ಧಿಸಿರುವುದು ಈ ತಾಲೂಕಿನ ಹೆಮ್ಮೆಯಾಗಿದೆ. ಇಂತಹ ಇನ್ನೂ ಹಲವು ಪ್ರತಿಭೆಗಳು ನಮ್ಮಲ್ಲಿದ್ದಾರೆ. ಇವರನ್ನು ಹೆಕ್ಕುವ ಕೆಲಸಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪಾಲಕರು ಹಾಗೂ ಶಿಕ್ಷಕರು ಗುರುತಿಸಿ ಇವರನ್ನು ಪ್ರೋತ್ಸಾಹಿಸಬೇಕು ಎಂದರು.
ಬಿಆರ್‌ಸಿ ಕುಮಾರಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಆರ್.ಪುಟ್ಟಬಸವಯ್ಯ, ಚಿನ್ನಪ್ಪ, ಅನಿತಾ ನಿರಂಜನ್, ಕುಮಾರ್, ಇಂದಿರಾ, ಮಧು, ಕೃಷ್ಣಮೂರ್ತಿ ಎಸ್‌ಡಿಎಂಸಿ ಅಧ್ಯಕ್ಷ ಶಿವಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ್, ಕೆಸ್ತೂರು ಕ್ಲಸ್ಟರ್‌ನ ಮಂಜುನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಮುಖ್ಯಶಿಕ್ಷಕ ನಂಜುಂಡಸ್ವಾಮಿ, ಭೀಮ್‌ರಾವ್ ರಾಮ್‌ಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪ್ರಮೋದ್ ಚಂದ್ರನ್, ಸಿಆರ್‌ಪಿ ಶಶಿರೇಖಾ, ಪುಷ್ಪಲತಾ ಸತೀಶ್ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net