ಕೂಲಿ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ

ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು.
ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು.
Published on
ಯಳಂದೂರು: ತಾಲೂಕಿನ ದುಗ್ಗಹಟ್ಟಿ ಗ್ರಾಮದ ಕೆರೆಯಲ್ಲಿ ನರೇಗಾ ಯೋಜನೆ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಮಂಗಳವಾರ ಗ್ರಾಮ ಪಂಚಾಯಿತಿ ಪಿಡಿಒ ಸಿ.ಎನ್. ಕಾವ್ಯಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾವ್ಯಾ, ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದ್ದಲ್ಲಿ ಮುಂಬರುವ ಮಾರಣಾಂತಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು. ಇಂದು ಆರೋಗ್ಯವಂತ ವ್ಯಕ್ತಿ ಯಾರು ಇರುತ್ತಾನೋ ಆತನೆ ಐಶ್ವರ್ಯವಂತ. ಇಂದಿನ ದಿನಮಾನದಲ್ಲಿ ಉತ್ತಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಕೂಲಿ ಕಾರ್ಮಿಕರು ಆರೋಗ್ಯದ ಜತೆಗೆ ಉತ್ತಮ ಆಹಾರವನ್ನ ಸೇವಿಸಬೇಕು. ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಸಿರಿಧಾನ್ಯಗಳಲ್ಲಿ ಯಥೇಚ್ಚವಾಗಿ ಪೌಷ್ಟಿಕಾಂಶಗಳಿವೆ. ಇದು ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಇದರ ಸೇವನೆಯನ್ನು ಕಡ್ಡಾಯವಾಗಿ ಮಾಡಬೇಕು. ಅಲ್ಲದೆ ಹೆಚ್ಚಿನ ನೀರನ್ನು ಕುಡಿಯಬೇಕು. ಯಾವುದೇ ಸಣ್ಣ ರೋಗ ಬಂದರೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರಕ್ತದೊತ್ತಡ, ರಕ್ತ ಪರೀಕ್ಷೆ, ಸಕ್ಕರೆ ಕಾಯಿಲೆ, ಸೇರಿದಂತೆ ಇತರ ಪರೀಕ್ಷೆಗಳನ್ನು ಮಾಡಲಾಯಿತು. ಅಗತ್ಯವಿದ್ದವರಿಗೆ ಔಷಧಗಳನ್ನು ಕೂಡ ವಿತರಣೆ ಮಾಡಲಾಯಿತು.
ಗ್ರಾಪಂ ಅಡಳಿತಾಧಿಕಾರಿ ವೆಂಕಟರಂಗಶೆಟ್ಟಿ, ಯೋಜನಾಧಿಕಾರಿ ಜಗದೀಶ್, ಕಾರ್ಯದರ್ಶಿ ಸುನೀಲ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net