ಚಾಮರಾಜನಗರ: ಜಿಲ್ಲೆಯಲ್ಲಿ ಜನಗಣತಿ-2027 ಪ್ರಕ್ರಿಯೆಯ ಪೂರ್ವ ಸಿದ್ದತೆಗಳು ಆರಂಭಗೊಳ್ಳುತ್ತಿದ್ದು, ನಿಖರ ಜನಗಣತಿಯಿಂದ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿ ಭಾರತ ಜನಗಣತಿ 2027ರ ಸಂಬಂಧ ಜಿಲ್ಲಾ ಹಂತದ ಅಧಿಕಾರಿಗಳು, ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಗುರುವಾರ ಆಯೋಜಿಸಲಾಗಿದ್ದ ಮೂರು ದಿನಗಳ ಪೂರ್ವಭಾವಿ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಬಾರಿ 2011ರಲ್ಲಿ ಜನಗಣತಿಯು ಹಳೆಯ ಮ್ಯಾನುವೆಲ್ ಪದ್ಧತಿಯಲ್ಲಿ ನಡೆದಿತ್ತು. ಆದರೆ ಈ ಬಾರಿ ಅಂದರೆ 2027ರ ಜನಗಣತಿಯು ಸಂಪೂರ್ಣವಾಗಿ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಮೋಡ್‌ನಲ್ಲಿ ನಡೆಯಲಿದೆ. ಡಿಜಿಟಲ್ ಮೋಡ್‌ನಲ್ಲಿ ನಡೆಯುವ ಜನಗಣತಿಯು ನಿಖರತೆ ಹಾಗೂ ಪಾರದರ್ಶಕತೆಯಿಂದ ಕೂಡಿರಲಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದರು.
2027ರ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಮನೆಪಟ್ಟಿ ಕಾರ್ಯಚರಣೆಯು ದಿನಾಂಕ: 16-04-2026 ರಿಂದ 15-05-2026 ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಮೂವತ್ತು ದಿನಗಳ ಮನೆಪಟ್ಟಿ ಕಾರ್ಯ ಪ್ರಾರಂಭವಾಗುವ ಹದಿನೈದು ದಿನಗಳ ಮೊದಲು ಸ್ವಯಂ ಗಣತಿಯ ಆಯ್ಕೆ ಲಭ್ಯವಿರುತ್ತದೆ. ಎರಡನೇ ಹಂತದ ಜನಗಣತಿಯು 2027ರ ಜನವರಿಯಿಂದ ಆರಂಭವಾಗಲಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಧನ್ಯ, ಜನಗಣತಿ ನೋಡೆಲ್ ಅಧಿಕಾರಿ ರಮೇಶ್ ಹಾಗೂ ಅಧಿಕಾರಿಗಳು ಹಾಜರಿದ್ದರು.