ಯಳಂದೂರು: ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಬೀದಿ ನಾಟಕದ ಮೂಲಕ ಸ್ವಚ್ಛತೆ, ಆರೋಗ್ಯ ಹಾಗೂ ನೀರಿನ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಆನಂದ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಗ್ರಾಮಗಳ ದೇಶವಾಗಿದೆ. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಇದರಿಂದ ಗ್ರಾಮ ಸುಂದರವಾಗಿ ಕಾಣುವ ಜತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ. ಉತ್ತಮ ಆರೋಗ್ಯ ಇಂದಿನ ಪ್ರಥಮ ಆದ್ಯತೆಯಾಗಬೇಕು. ಎಲ್ಲೆಂದರಲ್ಲಿ ಕಸವನ್ನು ಬೀಸಾಡಬಾರದು, ಪ್ಲಾಸ್ಟಿಕ್ ಬಳಕೆ ಮಾಡಬಾರದು, ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಸಂಬಂಧಪಟ್ಟ ಪಂಚಾಯಿತಿ ವಾಹನಕ್ಕೆ ನೀಡಬೇಕು ಎಂದು ತಿಳಿಸಿದರು.
ನೀರು ಅಮೂಲ್ಯವಾಗಿದೆ. ಪೋಲು ಮಾಡದೆ ಅವಶ್ಯಕತೆ ಇದ್ದಷ್ಟು ಮಾತ್ರ ಇದರ ಬಳಕೆ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸಲು ಬೀದಿ ನಾಟಕ ಉತ್ತಮ ಮಾಧ್ಯಮವಾಗಿದ್ದು, ದೃಶ್ಯ ರೂಪದಲ್ಲಿ ಸಾರ್ವಜನಿಕರಿಗೆ ಇದು ಬೇಗ ತಲುಪುತ್ತದೆ ಎಂಬ ಉದ್ದೇಶದಿಂದ ಅರಿವು ಮೂಡಿಸಲಾಗುತ್ತಿದೆ ಎಂದರು.
ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಜೈಗುರು, ಕಲಾವಿದರಾದ ಪುಟ್ಟಣ್ಣ, ಶಿವಯ್ಯ, ರಾಜು, ಸಿಂಧು, ರತ್ನಕುಮಾರಿ, ರಾಜೇಶ್ವರಿ ಸೇರಿದಂತೆ ಅನೇಕರು ಇದ್ದರು.