ಸಂಘರ್ಷದ ನೆಲದಲಿಲ್ಲ ಚಿರತೆ ಕಾರ್ಯಪಡೆ

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಮೇಕೆ ಬೇಟೆಯಾಡಿದ್ದ ಚಿರತೆ ಜನರ ಮೇಲೆ ದಾಳಿ ಮಾಡಬಹುದೆಂದು ಭಯದಲ್ಲಿ ಗ್ರಾಮಸ್ಥರು ಗುಂಪುಗೂಡಿ ಆತಂಕ ವ್ಯಕ್ತಪಡಿಸಿದ್ದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಮೇಕೆ ಬೇಟೆಯಾಡಿದ್ದ ಚಿರತೆ ಜನರ ಮೇಲೆ ದಾಳಿ ಮಾಡಬಹುದೆಂದು ಭಯದಲ್ಲಿ ಗ್ರಾಮಸ್ಥರು ಗುಂಪುಗೂಡಿ ಆತಂಕ ವ್ಯಕ್ತಪಡಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿರತೆ ಹಾವಳಿ ಹೆಚ್ಚಾಗಿರುವ ಜಿಲ್ಲೆಯಲ್ಲಿ ಕಾಡುತ್ತಿರುವ ಕೊರತೆ
  • ಮೈಸೂರಿನಿಂದ ಎರವಲು ಪಡೆಯುವ ಪರಿಸ್ಥಿತಿ
ಚಾಮರಾಜನಗರ: ಮಾನವ-ಚಿರತೆ ಸಂಘರ್ಷವಿರುವ ಕಾಡೂರಿನಲ್ಲಿ ಕಾರ್ಯ ಪಡೆ ಇಲ್ಲದ ಕೊರತೆ ತುಂಬಾ ಕಾಡುತ್ತಿದೆ.
ದಟ್ಟ ಕಾನನಗಳ ನಾಡಾಗಿರುವ ಚಾಮರಾಜನಗರ ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮತ್ತು ಕಾವೇರಿ, ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನೆಲೆಯಾಗಿದೆ.
ಇಲ್ಲಿ ಮಾನವರೊಂದಿಗೆ ಸೃಷ್ಟಿಯಾಗುತ್ತಿರುವ ಸಂಘರ್ಷದಲ್ಲಿ ಹುಲಿ, ಆನೆಗಳ ನಂತರ ಚಿರತೆಯೂ ಸ್ಥಾನ ಪಡೆದುಕೊಂಡಿದೆ.
ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದ ಕಚೇರಿ ನೀಡಿರುವ ಮಾಹಿತಿ ಪ್ರಕಾರ, 2025- 2026ನೇ ಸಾಲಿನಲ್ಲಿ (ಮಾ.31ವರಗೆ) ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ದಾಳಿಗೆ 318 ಜಾನುವಾರುಗಳು ಬಲಿಯಾಗಿರುವ ಪ್ರಕರಣಗಳು ವರದಿಯಾಗಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ವನ್ಯಜೀವಿಗಳ ದಾಳಿಗೆ 127 ಜಾನುವಾರು ಸಾವಿನ ಪ್ರಕರಣಗಳು ಮತ್ತು ಕಾವೇರಿ ವನ್ಯಜೀವಿಧಾಮದಲ್ಲಿ 203 ಪ್ರಕರಣಗಳು ವರದಿಯಾಗಿವೆ.
ಈ ಪ್ರಕರಣಗಳಲ್ಲಿ ಚಿರತೆ ದಾಳಿಗೆ ಎಷ್ಟು ಜಾನುವಾರುಗಳು ಸತ್ತಿವೆ ಎನ್ನುವ ನಿಖರವಾದ ಲೆಕ್ಕ ಅರಣ್ಯ ಇಲಾಖೆಯ ಬಳಿ ಲಭ್ಯವಿಲ್ಲ. ಆದರೆ ಇವುಗಳಲ್ಲಿ ಚಿರತೆ ಪಾಲೂ ಸೇರಿಕೊಂಡಿವೆ. ಮೂರು ಅರಣ್ಯಗಳಿಂದ ಸೇರಿ ಒಟ್ಟು 648 ಜಾನುವಾರುಗಳ ಸಾವಿನ ಪ್ರಕರಣಗಳು ದಾಖಲಾಗಿದ್ದು, ಇದಕ್ಕೆ ಅರಣ್ಯ ಇಲಾಖೆಯಿಂದ 8759477 ರೂ. ಪರಿಹಾರವನ್ನು ನೀಡಲಾಗಿದೆ.
ಇಷ್ಟು ದೊಡ್ಡ ಮಟ್ಟದಲ್ಲಿ ಸಂಘರ್ಷವಿರುವ ಚಾಮರಾಜನಗರಕ್ಕೆ ಚಿರತೆ ಕಾರ್ಯ ಪಡೆ ಇಲ್ಲದೆ ಇರುವುದು ಅಚ್ಚರಿಯ ಸಂಗತಿ. ಈ ಪಡೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುತ್ತಾರೆ. ವಾಹನ, ಪಶು ವೈದ್ಯರು, ಅಗತ್ಯ ಸಲಕರಣೆಗಳು ಇರುತ್ತವೆ. ಜನವಸತಿ ಪ್ರದೇಶದಲ್ಲಿ ಬರುವ ಚಿರತೆಯನ್ನು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುತ್ತಾರೆ. ಚಿರತೆ ಹಾವಳಿ ಇರುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾರೆ. ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಕಾಡಂಚಿನೊಳಗಿರುವ ಜನವಸತಿ ಪ್ರದೇಶಗಳಲ್ಲಿ ಉಪಟಳ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆಗೆ ಬೇಕಾಗಿರುವ ಚಿರತೆ ಕಾರ್ಯ ಪಡೆಯೇ ಜಿಲ್ಲೆಯಲ್ಲಿ ಇಲ್ಲ.
ಮೈಸೂರಿನಿಂದ ಎರವಲು ಸೇವೆ:
ಮೈಸೂರು ಚಾಮರಾಜನಗರಕ್ಕಿಂತಲೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ಜಿಲ್ಲೆ. ಚಾಮರಾಜನಗರ ಮೈಸೂರಿಗಿಂತಲೂ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ. ಇಲ್ಲಿ ಇರಬೇಕಾಗಿದ್ದ ಚಿರತೆ ಕಾರ್ಯ ಪಡೆ ಮೈಸೂರಿನಲ್ಲಿ ಇದೆ. ಇಲ್ಲಿ 2023-24ರಲ್ಲಿ ಚಿರತೆ ಕಾರ್ಯ ಪಡೆ ಸ್ಥಾಪನೆಯಾಯಿತು. ತಿ.ನರಸೀಪುರದಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿರತೆ ಕಾರ್ಯ ಪಡೆ ಸ್ಥಾಪನೆ ಮಾಡಲಾಯಿತು. ಅರಣ್ಯ ಪ್ರದೇಶದಿಂದ ಹೊರಗಿರುವ ಚಿರತೆಗಳನ್ನು ಪತ್ತೆ ಮಾಡುವುದು, ಬೋನು ಇಟ್ಟು ಕಾರ್ಯಾಚರಣೆ ನಡೆಸುವುದು, ಸೆರೆ ಹಿಡಿಯುವ ಕಾರ್ಯವನ್ನು ಮಾಡಲಾಗುತ್ತಿದೆ. ಪಕ್ಕದ ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆ ದಾಳಿ ಹೆಚ್ಚಾದಾಗ ಮೈಸೂರಿನ ಚಿರತೆ ಕಾರ್ಯ ಪಡೆಯನ್ನು ಎರವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಸ್ತುತ ಚಿರತೆ ಹಾವಳಿಗೆ ಕಡಿವಾಣ ಹಾಕಲು ಮೈಸೂರಿನ ಚಿರತೆ ಕಾರ್ಯ ಪಡೆ ಕರ್ತವ್ಯ ನಿರ್ವಹಿಸುತ್ತಿದೆ.
‘ಬೆಟ್ಟ’ದಷ್ಟು ಭಯ ಹುಟ್ಟಿಸಿರುವ ಚಿರತೆ:
ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಗ್ರಾಮಸ್ಥರಲ್ಲಿ ಬೆಟ್ಟದಷ್ಟೇ ಭಯವನ್ನು ಹುಟ್ಟುಹಾಕಿದೆ. ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜ.21ರಂದು ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಮಂಡ್ಯದ ಚೀರನಹಳ್ಳಿಯ ಪ್ರವೀಣ್(25) ಚಿರತೆ ದಾಳಿಗೆ ಬಲಿಯಾದ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿತು. ಇದಾದ ಮೇಲೆ ಮೇ 10ರಂದು ನಾಗಮಲೆ ಕ್ಷೇತ್ರಕ್ಕೆ ಕುಟುಂಬದವರೊಂದಿಗೆ ತೆರಳುತ್ತಿದ್ದ ಬಾಲಕ ಹರ್ಷಿತ್(10) ಚಿರತೆ ದಾಳಿಯಿಂದ ಸತ್ತುಹೋದ. ಈ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು. ಇದಾದ ಮೇಲೂ ನಾಗಮಲೆಯಲ್ಲಿ ಚಿರತೆಯೊಂದು ಮೇಕೆಯನ್ನು ಬೇಟೆಯಾಡಿದೆ. ಮುಂದಿನ ದಿನಗಳಲ್ಲಿ ಜನರ ಮೇಲೆ ಚಿರತೆ ದಾಳಿ ಮಾಡಬಹುದೆಂದು ಗ್ರಾಮಸ್ಥರು ಜೀವಭಯದಲ್ಲಿ ದಿನದೂಡುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ಚಿರತೆ ಕಾರ್ಯ ಪಡೆ ಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಸಿದ್ದೇವೆ. ಈ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅವರ ಗಮನಕ್ಕೆ ತಂದಿದ್ದೇವೆ.
ಮಾಲತಿ ಪ್ರಿಯಾ, ಚಾಮರಾಜನಗರ ವೃತ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net