ಕಳೆದ ತಿಂಗಳು ಜ.21 ರಂದು ತಾಳುಬೆಟ್ಟದ ರಂಗಸ್ವಾಮಿ ಒಡ್ಡುವಿನ ಬಳಿಯ ಮೆಟ್ಟಿಲುಗಳ ಮೂಲಕ ತೆರಳುತ್ತಿದ್ದ ಕಾಲ್ನಡಿಗೆ ಭಕ್ತ ಮಂಡ್ಯದ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬುವರು ಚಿರತೆ ದಾಳಿಗೆ ಬಲಿಯಾಗಿದ್ದರು. ಜತೆಗೆ ಫೆ.10 ರಂದು ಇದೇ ಮಾರ್ಗದಲ್ಲಿ ಪಾಲಕರೊಂದಿಗೆ ಕಾಲ್ನಡಿಗೆ ತೆರಳುತ್ತಿದ್ದ ಚನ್ನಪಟ್ಟಣದ ಶ್ರೇಯಸ್ ಎಂಬ ಬಾಲಕ ಚಿರತೆ ದಾಳಿಯಿಂದ ಗಾಯಗೊಂಡು ಅದೃಷ್ಟವಾಶಾತ್ ಪಾರಾಗಿದ್ದನು. ಮಹಾ ಶಿವರಾತ್ರಿ ಜಾತ್ರೆಯ ಅಂಗವಾಗಿ ಲಕ್ಷಾಂತರ ಕಾಲ್ನಡಿಗೆಯ ಭಕ್ತರು ಈ ಮಾರ್ಗದಲ್ಲಿ ತೆರಳುವ ಹಿನ್ನಲೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಗಸ್ತು ನಡೆಸುತ್ತಿದ್ದು, ಕಟ್ಟೆಚ್ಚರ ವಹಿಸಿದ್ದಾರೆ. ಆದರೂ ರಾತ್ರಿ ವೇಳೆ ಭಕ್ತರಿಗೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆ ಬೋನು ಇರಿಸಿ ಚಿರತೆ ಸೆರೆಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಗಾ ವಹಿಸಿದ್ದಾರೆ.