ತಾಳುಬೆಟ್ಟದ ಬಳಿ ಚಿರತೆ ಮರಿ ಪ್ರತ್ಯಕ್ಷ

ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿಯ ತಡೆಗೋಡೆಯ ಮೇಲೆ ಕಾಣಿಸಿಕೊಂಡ 2 ಚಿರತೆ ಮರಿಗಳು.
ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿಯ ತಡೆಗೋಡೆಯ ಮೇಲೆ ಕಾಣಿಸಿಕೊಂಡ 2 ಚಿರತೆ ಮರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ರಂಗಸ್ವಾಮಿ ಒಡ್ಡುವಿನ ಸಮೀಪ ಕಾಣಿಸಿಕೊಂಡು ಆತಂಕ ಸೃಷ್ಟಿ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಸಮೀಪ ಶನಿವಾರ ರಾತ್ರಿ ತಡೆಗೋಡೆಯ ಮೇಲೆ 2 ಚಿರತೆ ಮರಿಗಳು ಕಾಣಿಸಿಕೊಂಡು ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿತು. 
ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ಕಳೆದ ತಿಂಗಳ ಹಿಂದೆ ರಾತ್ರಿ ವೇಳೆ 2 ಬಾರಿ ಚಿರತೆ ಮರಿಗಳು ಕಾಣಿಸಿಕೊಂಡು ಭಕ್ತರಲ್ಲಿ ಭಯವನ್ನು ಉಂಟು ಮಾಡಿತ್ತು. ಇದರ ದೃಶ್ಯವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಕ್ತರು ಎಚ್ಚರಿಕೆಯಿಂದ ತೆರಳುವಂತೆ ಮನವಿ ಮಾಡಿದ್ದರು. ಹೀಗಿರುವಾಗ ರಾತ್ರಿ ರಂಗಸ್ವಾಮಿ ಒಡ್ಡುವಿನ ಸಮೀಪದ ರಸ್ತೆ ಬದಿಯ ತಡೆಗೋಡೆಯ ಮೇಲೆ 2 ಚಿರತೆ ಮರಿಗಳು ಕಾಣಿಕೊಂಡಿವೆ. ಈ ವೇಳೆ ಬಸ್‌ನಲ್ಲಿ ತೆರಳುತ್ತಿದ್ದವರು ಚಿರತೆಯನ್ನು ನೋಡಿ ಆತಂಕ ವ್ಯಕ್ತಪಡಿಸಿದರು. ಇದರ ದೃಶ್ಯವನ್ನು ಬಸ್ಸಿನಲ್ಲಿದ್ದವರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಕ್ರಮಕ್ಕೆ ಒತ್ತಾಯ: ಮ.ಬೆಟ್ಟ ಲಕ್ಷಾಂತರ ಭಕ್ತರು ಭೇಟಿ ನೀಡುವ ಪುಣ್ಯ ಸ್ಥಳ. ಹಾಗಾಗಿ ಈ ಮಾರ್ಗದ ಮೂಲಕ ಭಕ್ತರು ಅದರಲ್ಲೂ ಪಾದಯಾತ್ರಿಗಳು ಹಗಲು ರಾತ್ರಿಯೆನ್ನದೇ ತೆರಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾರ್ಗದಲ್ಲಿ ಆಗ್ಗಾಗ್ಗೆ ಚಿರತೆ ಮರಿಗಳು ಕಾಣಿಸಿಕೊಳ್ಳುತ್ತಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ. ಮುಂದಿನ ತಿಂಗಳು ಪ್ರತಿ ವರ್ಷದಂತೆ ಮಹಾ ಶಿವರಾತ್ರಿಗೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ಮ.ಬೆಟ್ಟಕ್ಕೆ ಸಾಗಾರೋಪಾದಿಯಲ್ಲಿ ತೆರಳಿದ್ದಾರೆ. ಹಾಗಾಗಿ ಚಿರತೆಗಳಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವನ್ನು ವಹಿಸದೇ ಚಿರತೆಗಳನ್ನು ಅರಣ್ಯ ಪ್ರದೇಶದೊಳಗೆ ಓಡಿಸಬೇಕು. ಇಲ್ಲವೇ  ರಸ್ತೆ ಬದಿ ಕಾಣಿಸಿಕೊಳ್ಳದಂತೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net