ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಆರ್‌ಕೆ ಚಾಲನೆ

ಕೊಳ್ಳೇಗಾಲ ತಾಲೂಕಿನ ಟಗರಪುರ ಮೋಳೆ ಸಮೀಪದಲ್ಲಿ ಸಿಲ್ಕಲ್‌ಪುರ ಗ್ರಾಮದ ಚೆಕ್ ಡ್ಯಾಂ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
ಕೊಳ್ಳೇಗಾಲ ತಾಲೂಕಿನ ಟಗರಪುರ ಮೋಳೆ ಸಮೀಪದಲ್ಲಿ ಸಿಲ್ಕಲ್‌ಪುರ ಗ್ರಾಮದ ಚೆಕ್ ಡ್ಯಾಂ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
Published on
ಕೊಳ್ಳೇಗಾಲ: ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.
ತಾಲೂಕಿನ ಸಿಲ್ಕಲ್‌ಪುರ ಗ್ರಾಮದಲ್ಲಿ 43.30 ಲಕ್ಷ ಹಾಗೂ ಕುಣಗಳ್ಳಿ ಗ್ರಾಮದಲ್ಲಿ 46.03 ಲಕ್ಷ ರೂ. ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಹಾಗೂ ಕಜ್ಜಿಹುಂಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಿ ಮಾತನಾಡಿ, ರೈತರ ಜಮೀನಿಗೆ ಅನುಕೂಲವಾಗಲಿ ಎಂದು ಚೆಕ್ ಡ್ಯಾಂ ಎರಡು ಕೋಟಿ ರೂ. ಹೆಚ್ಚು ಅನುದಾನದಲ್ಲಿ ನಿರ್ಮಿಸುತ್ತಿರುವುದಾಗಿ ತಿಳಿಸಿದರು.
ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಮಳೆ ನೀರು ಶೇಖರಣೆಯಾಗಿ ಬೋರ್‌ವೆಲ್‌ಗಳಿಗೂ ಅನುಕೂಲವಾಗುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಕಾಮಗಾರಿ ಅನುದಾನ ಬಿಡುಗಡೆ ಮಾಡಿದ್ದ ಸಣ್ಣ ನೀರಾವರಿ ಇಲಾಖೆಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಕಾಡಾ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 20 ಕೋಟಿ ರೂ.ಅನುದಾನ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ 25 ಕೋಟಿ ಅನುದಾನ ಪಡೆದು ಒಟ್ಟು 45 ಕೋಟಿ ಹಣದಲ್ಲಿ ರೈತರು ಜಮೀನುಗಳಿಗೆ ಸಂಪರ್ಕ ರಸ್ತೆ ಕಲ್ಪಿಸಿಕೊಡಲಾಗುತ್ತಿದೆ. ನನ್ನ ಕಾಡಾ ವ್ಯಾಪ್ತಿಗೆ ಒಟ್ಟು 16 ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಬರುತ್ತಿದ್ದು, ಈ ಪೈಕಿ ಮೈಸೂರು ಹಾಗೂ ಚಾಮರಾಜನಗರ ಕಡೆಗೆ ಹೆಚ್ಚು ಅನುದಾನ ಬಳಸಲಾಗುತ್ತಿದೆ. ನನಗೆ ಅನುದಾನ ಕೊಡಿಸಲು ಶ್ರಮಿಸಿದ ವರುಣಾ ಕ್ಷೇತ್ರದ ಯತೀಂದ್ರ ಸಿದ್ದರಾಮಯ್ಯ, ಚಾಮರಾಜನಗರ ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇಗಾಲ ಎ.ಆರ್.ಕೃಷ್ಣಮೂರ್ತಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಯಳಂದೂರು ಗ್ಯಾರಂಟಿ ಅಧ್ಯಕ್ಷ ಪ್ರಭು ಪ್ರಸಾದ್, ಸದಸ್ಯರು ಹಾಗೂ ಟಗರಪುರ ಮಾಜಿ ಅಧ್ಯಕ್ಷ ನಿಂಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್, ಪುಟ್ಟಮಾದಯ್ಯ, ಕಾಡಾ ಇಲಾಖೆ ಎಇಇ ಗಣೇಶ್, ಗುತ್ತಿಗೆದಾರರು ರೇವಣ್ಣ, ಸಣ್ಣ ನೀರಾವರಿ ಇಲಾಖೆ ಎಇಇ ಅಭಿಲಾಷ್, ಎಇ ಪ್ರತಾಪ್, ಗುತ್ತಿಗೆದಾರರು ಮಂಜುನಾಥ್, ವಕೀಲರು ಚಂದ್ರು ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net