ಗೋಪಾಲಸ್ವಾಮಿ ಬೆಟ್ಟದ ತಪ್ಪಲಲ್ಲಿ ಮೂಲ ಸೌಕರ್ಯ ಕೊರತೆ

ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರಯಾಣಿಕರು ಬಿರುಬಿಸಿಲಿನಲ್ಲಿ ಗೇಟ್ ಹೊರಗೆ ಕಾದು ನಿಂತಿರುವುದು.
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರಯಾಣಿಕರು ಬಿರುಬಿಸಿಲಿನಲ್ಲಿ ಗೇಟ್ ಹೊರಗೆ ಕಾದು ನಿಂತಿರುವುದು.
Published on
ಗುಂಡ್ಲುಪೇಟೆ: ಬಂಡೀಪುರದ ಸಫಾರಿ ಬಂದ್ ನಂತರ ಹೆಚ್ಚಿನ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟದತ್ತ ಮುಖ ಮಾಡಿದ್ದರಿಂದ ಹೆಚ್ಚಿನ ಆದಾಯ ಗಳಿಸುತ್ತಿರುವ ಸಾರಿಗೆ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರಸೂಕ್ಷ್ಮಪ್ರದೇಶ ಅರಣ್ಯದಲ್ಲಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟ ಮುಜರಾಯಿ ಇಲಾಖೆಗೆ ಸೇರಿದೆ. ಅರಣ್ಯ ಇಲಾಖೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ದೇವಾಲಯಕ್ಕೆ ಹೋಗುವ ಪ್ರವಾಸಿಗರು ಸಾರಿಗೆ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಪ್ರತಿ ದಿನವೂ 2-3 ಬಸ್‌ಗಳನ್ನು ನಿಯೋಜಿಸುವ ಸಾರಿಗೆ ಇಲಾಖೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಪಟ್ಟಣದಿಂದ ಹೆಚ್ಚುವರಿ ಬಸ್‌ಗಳನ್ನು ಕಳಿಸುತ್ತಿದೆ. ಈ ಬಸ್‌ಗಳು ಪಟ್ಟಣದಿಂದ ಬರುವವರೆಗೆ ಇಲ್ಲವೆ ಬೆಟ್ಟದ ಮೇಲಿನ ದೇವಾಲಯಕ್ಕೆ ಹೋಗಿರುವ ಬಸ್‌ಗಳು ಕೆಳಗೆ ಬರುವವರೆಗೂ ಪ್ರವಾಸಿಗರು ಮಳೆ ಬಿಸಿಲಿನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿದೆ.
ಗೇಟ್ ಒಳಗೆ ಬಿಡದ ಅರಣ್ಯ ಇಲಾಖೆ: ಬೆಟ್ಟಕ್ಕೆ ಹೋಗುವ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿದ ನಂತರ ಗೇಟ್ ಒಳಗೆ ಬಿಡಲಾಗುತ್ತಿತ್ತು. ಬಸ್‌ಗಳು ಬರುವವರೆಗೆ ಪ್ರಯಾಣಿಕರು ಮರಗಳ ನೆರಳಿನಲ್ಲಿ ಆಶ್ರಯ ಪಡೆದು ಬಿಸಿಲು-ಮಳೆಯಿಂದ ಪಾರಾಗುತ್ತಿದ್ದರು. ಬಸ್‌ಗಳು ತಡವಾದರೆ ಮರಗಳ ನೆರಳಿನಲ್ಲಿ ನಿಂತು ರಕ್ಷಣೆ ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಹೆಡಿಯಾಲ ಸುತ್ತಮುತ್ತಲೂ ವನ್ಯಜೀವಿಗಳ ದಾಳಿಯಿಂದ ಸಾವು-ನೋವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರಯಾಣಿಕರನ್ನು ಗೇಟ್ ಒಳಗೆ ಬಿಡುತ್ತಿಲ್ಲ. ಇದರಿಂದ ದೇವಾಲಯಕ್ಕೆ ಹೋಗುವ ಮತ್ತು ಬರುವ ಮಹಿಳೆಯರು, ಮಕ್ಕಳು, ವೃದ್ಧರು ಬಿಸಿಲು-ಮಳೆಯಲ್ಲಿ ಸರದಿ ಸಾಲಿನಲ್ಲಿ ಕಾದು ನಿಲ್ಲುವಂತಾಗಿದೆ. ಶಕ್ತಿ ಯೋಜನೆಯಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಬರುವ ಪ್ರಯಾಣಿಕರು ಬಿರುಬಿಸಿಲಿನ ತಾಪ ತಾಳಲಾರದೆ ಅರಣ್ಯ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬೆಟ್ಟಕ್ಕೆ ಹೋಗುವ ಪ್ರವಾಸಿಗರ ಬಸ್, ಕಾರುಗಳು, ಟೆಂಪೋ ಟ್ರಾವಲ್ಲರ್ ಮುಂತಾದ ವಾಹನಗಳಿಂದ ಅರಣ್ಯ ಇಲಾಖೆ ಪಾರ್ಕಿಂಗ್ ಶುಲ್ಕ ವಸೂಲು ಮಾಡುತ್ತಿದೆ. ಇದರಿಂದ ಪ್ರತಿ ದಿನವೂ 5 ರಿಂದ 8 ಸಾವಿರ ರೂ.ವರೆಗೆ, ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ದುಪ್ಪಟ್ಟು ಆದಾಯ ಸಂಗ್ರಹವಾಗುತ್ತಿದೆ. ಆದರೆ ಪ್ರಯಾಣಿಕರನ್ನು ಮರಗಳ ನೆರಳಿನಲ್ಲಿ ನಿಲ್ಲಲೂ ಅವಕಾಶ ನೀಡುತ್ತಿಲ್ಲ. ಇಲ್ಲವೇ ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆಗೂ ಸೂಚಿಸುತ್ತಿಲ್ಲ.

ಸಾರಿಗೆ ಇಲಾಖೆ ಇನ್ನೂ ಹೆಚ್ಚಿನ ಬಸ್‌ಗಳನ್ನು ನಿಯೋಜಿಸಿ ಪ್ರಯಾಣಿಕರು ಕಾದು ನಿಲ್ಲದಂತೆ ಕ್ರಮಕೈಗೊಳ್ಳಬೇಕು. ಇತ್ತೀಚೆಗೆ ಹೆಡಿಯಾಲ ಸುತ್ತಮುತ್ತ ವನ್ಯಜೀವಿಗಳ ದಾಳಿಯಿಂದ ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಒಳಗೆ ಬಿಡುತ್ತಿಲ್ಲ. ಸಾರಿಗೆ ಸಂಸ್ಥೆಯೇ ತನ್ನ ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆ ಮಾಡಿಕೊಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net