ಮ.ಬೆಟ್ಟದಲ್ಲಿ ಮಾದಪ್ಪನಿಗೆ ಕುಂಭಾಭಿಷೇಕ

ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ  ನೇತೃತ್ವದಲ್ಲಿ ಶಿವ ಪಾವರ್ತಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಮರಿಸ್ವಾಮಿ, ಪುಟ್ಟಣ್ಣ ಮಾಸ್ಟರ್, ಕೆ.ವಿ.ಮಾದೇಶ್ ಇತರರಿದ್ದರು.
ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಶಿವ ಪಾವರ್ತಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಮರಿಸ್ವಾಮಿ, ಪುಟ್ಟಣ್ಣ ಮಾಸ್ಟರ್, ಕೆ.ವಿ.ಮಾದೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರಾವಣ ಮಾಸ ಆರಂಭದ ಹಿನ್ನೆಲೆ ಬೇಡಗಂಪಣ ಅರ್ಚಕರಿಂದ ವಿಶೇಷ ಪೂಜೆ
  • ಸಾಲೂರು ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಪೂಜಾ ಕೈಂಕರ್ಯ
  • ಶಿವ ಪಾರ್ವತಿ ಉತ್ಸವ ಮೂರ್ತಿ ಮೆರವಣಿಗೆ
  • ಲಕ್ಷ ಬಿಲ್ವಾರ್ಚನೆ, ಧೂಪದಾರತಿ ಸೇವೆ

ಹನೂರು:

ಶ್ರಾವಣ ಮಾಸ ಆರಂಭದ ಮೊದಲ ದಿನವಾದ ಗುರುವಾರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ಕುಂಭಾಭಿಷೇಕ ನೆರವೇರಿಸಿದರು.

ಶ್ರಾವಣ ಮಾಸದ ಆರಂಭದಂದು ಮಾದಪ್ಪನಿಗೆ ವರ್ಷಕ್ಕೊಮ್ಮೆ ನಡೆಯುವ ಕುಂಭಾಭಿಷೇಕದ ಹಿನ್ನೆಲೆ ದೇಗುಲದಲ್ಲಿ ಬೆಳಗಿನ ಜಾವ 4 ರಿಂದ 6ರವೆರೆಗೆ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉಪವಾಸವಿದ್ದ ಬೇಡಗಂಪಣ ಸಮುದಾಯದ ದೊಡ್ಡಪಾಲು, ಚಿಕ್ಕಪಾಲು ಹಾಗೂ ಕಾಡುವೀರನ ಪಾಲಿನ 108 ತಂಬಡಿಗಳು ಬೆಳಗ್ಗೆ 9.50ರಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ಹಾಗೂ ಭಕ್ತರ ಸಮ್ಮುಖದಲ್ಲಿ ಶಿವ ಪಾರ್ವತಿಯ ಉತ್ಸವ ಮೂರ್ತಿಯನ್ನು ಹೊತ್ತು ದೇಗುಲದ ಸುತ್ತ ಮೆರವಣಿಗೆ ನಡೆಸಿದರು. ಉತ್ಸವಮೂರ್ತಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿ ಮಂಗಳವಾದ್ಯ, ದೊಡ್ಡಸತ್ತಿಗೆ, ಚಿಕ್ಕಸತ್ತಿಗೆ, ಸೂರಿಪಾನಿ, ನಂದಿಕಂಬ, ಛತ್ರಿ ಚಾಮರದೊಂದಿಗೆ ದೇಗುಲ ಸಮೀಪವಿರುವ ನಂದನವನದ ಮಜ್ಜನ ಬಾವಿಗೆ ತೆರಳಿದರು. ಈ ವೇಳೆ 108 ಕುಂಭ ಕಳಸಗಳಿಗೆ ನೀರು ತುಂಬಿಸಿ ಶಿವ ಪಾರ್ವತಿ ಉತ್ಸವ ಮೂರ್ತಿಗೆ ಸಂಕಲ್ಪಾಧಿ, ಅಷ್ಟಗಂಧ ಪೂಜೆ, ಪುಣ್ಯಾಹ, ಗಣಪತಿ ಪೂಜೆ, ಸಹಸ್ರನಾಮ ಬಿಲ್ವಾರ್ಚನೆ ಹಾಗೂ ಧೂಪದಾರತಿ ಸೇವೆ ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸಿದರು.
ಮಾದಪ್ಪನಿಗೆ ಕುಂಭಾಭಿಷೇಕ
ಸಾಲೂರು ಶ್ರೀಗಳ ಸಮ್ಮುಖದಲ್ಲಿ ಕುಂಭ ಕಳಸ ಹೊತ್ತ ಅರ್ಚಕರು ಮೆರವಣಿಗೆ ಮೂಲಕ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಹಾಕಿದರು. ಒಳಾಂಗಣದಲ್ಲಿರುವ ಚಪ್ಪರದ ಮಾಳಿಗೆಯಲ್ಲಿ ಕುಂಭ ಕಳಸಗಳನ್ನಿರಿಸಿ ಶ್ರೀಗಳು, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ ಹಾಗೂ ಭಕ್ತರ ಸಮ್ಮುಖದಲ್ಲಿ ಪುಣ್ಯಾಹ, ನವಗ್ರಹ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಮಹಾ ಮೃತ್ಯಂಜಯ ಹೋಮ, ವಿವಿಧ ಕಳಸಗಳ ಆವಾಹನೆ, ಇನ್ನಿತರ ಹೋಮ, ಹವನದೊಂದಿಗೆ ಪೂರ್ಣಾಹುತಿ ನೆರವೇರಿಸಲಾಯಿತು. ಕುಂಭಕಳಸವನ್ನು ಗರ್ಭಗುಡಿಗೆ ಕೊಂಡೊಯ್ದು ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರೀ ಮಹದೇಶ್ವರ ಸ್ವಾಮಿಗೆ 108 ಕುಂಭದಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಜತೆಗೆ 108 ಎಳನೀರಿನ ಅಭಿಷೇಕ, ಹಾಲು, ಗಂಧ ಹಾಗೂ ಪಂಚಾಮೃತ ಅಭಿಷೇಕವೂ ನೆರವೇರಿತು. ಬಿಲ್ವಾರ್ಚನೆ ಮಾಡಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮೂಲಕ ಮಾದಪ್ಪನಿಗೆ ಕುಂಭಾಭಿಷೇಕವು ಸಂಪ್ರದಾಯದಂತೆ ವಿಜೃಂಭಣೆಯಿಂದ ಜರುಗಿತು.
ಸಾಕಾನೆ ಭಾಗಿ:
ಕುಂಭಾಭಿಷೇಕದ ಮೆರವಣಿಗೆಯಲ್ಲಿ ಹುಲಿ, ರುದ್ರಾಕ್ಷಿ ಹಾಗೂ ಬಸವ ಉತ್ಸಾವಾದಿ ವಾಹನಗಳು ಭಾಗಿಯಾಗಿದ್ದವು. ವೀರಗಾಸೆ ಕುಣಿತ ಮೆರವಣಿಗೆಗೆ ಮೆರುಗು ತಂದಿತು. ಸಾಕಾನೆ ಉಮಾ ಮಹೇಶ್ವರಿ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆಯಿತು. ನೆರೆದಿದ್ದ ಸಾವಿರಾರು ಭಕ್ತರು ಮಾದಪ್ಪನಿಗೆ ಜಯಘೋಷ ಮೊಳಗಿಸಿದರು. ಕೆಲ ಭಕ್ತರು ಎಳನೀರನ್ನು ದೇಗುಲಕ್ಕೆ ಹೊತ್ತು ತಂದು ಭಕ್ತಿಭಾವ ಮೆರೆದರು.
ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಮರಿಸ್ವಾಮಿ, ಬೇಡಗಂಪಣ ಸಮುದಾಯದ ಪುಟ್ಟಣ್ಣ ಮಾಸ್ಟರ್, ಕೆ.ವಿ.ಮಾದೇಶ್, ದೇಗುಲದ ಆಗಮಿಕ ಕರವೀರಸ್ವಾಮಿ ಹಾಗೂ ಪ್ರಾಧಿಕಾರದ ಅಧಿಕಾರಿಗಳು, ನೌಕರರು ಇದ್ದರು.
ಶ್ರಾವಣ ಮಾಸ ಮುಗಿಯುವವರೆಗೂ ಸಂಪ್ರದಾಯದಂತೆ ನಿತ್ಯ ಮಧ್ಯಾಹ್ನ ಮಾದಪ್ಪನಿಗೆ 12 ಕುಂಭಕಳಸದೊಂದಿಗೆ ಮಜ್ಜನ ಅಭಿಷೇಕ ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ಜರುಗಲಿವೆ. ಶ್ರಾವಣ ಮಾಸದ ಕೊನೆಯ ದಿನ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ 108 ಕುಂಭ ಕಳಸದೊಂದಿಗೆ ಮಾದಪ್ಪನಿಗೆ ಕುಂಭಾಭಿಷೇಕ ನೆರವೇರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net