ಎಆರ್‌ಕೆಗೆ ಕೆಪಿಸಿಸಿ ಹೈಕಮಾಂಡ್ ಸಚಿವ ಸ್ಥಾನ ನೀಡಲಿ

 ರಾಜೇಂದ್ರ ಕುಂತೂರು ಮೋಳೆ
ರಾಜೇಂದ್ರ ಕುಂತೂರು ಮೋಳೆ
Published on
ಕೊಳ್ಳೇಗಾಲ: ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಲಾಗುವುದು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ ಕುಂತೂರು ಮೋಳೆ ಹೇಳಿದರು.
ಮೂರನೇ ಬಾರಿಗೆ ಶಾಸಕರಾಗಿರುವ ಎ.ಆರ್.ಕೃಷ್ಣಮೂರ್ತಿ ಅವರು ಅನುಭವಿ ರಾಜಕಾರಣಿ. ಜಿಲ್ಲೆಯ ಉದ್ದಗಲದ ನಾಡಿಮಿಡಿತ ಅವರಿಗೆ ತಿಳಿದಿದೆ. ಅಧಿವೇಶನಗಳಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ದನಿ ಎತ್ತಿ ಪರಿಹಾರ ಸೂಚಿಸಿದ್ದಾರೆ. ಇಂತಹ ಜನಪರ ಚಿಂತಕನಿಗೆ ಸಚಿವ ಸ್ಥಾನವನ್ನು ಎಐಸಿಸಿ ಮತ್ತು ಕೆಪಿಸಿಸಿ ಹೈಕಮಾಂಡ್ ನಾಯಕರು ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮಾಜಿ ರಾಜಪಾಲ ದಿ.ಬಿ.ರಾಚಯ್ಯ ಅವರು ನಾಡು ಕಂಡ ಮೇರು ರಾಜಕಾರಣಿ. ಮುಖ್ಯಮಂತ್ರಿಯಾಗುವ ಅರ್ಹತೆ ಅವರಲ್ಲಿತ್ತು. ಅವರ ಪುತ್ರ ಎಆರ್‌ಕೆಗೆ ರಾಜಕಾರಣ ರಕ್ತದಲ್ಲಿಯೇ ಇದೆ. ಈಗಿನ ಅಧಿಕಾರವಧಿಯಲ್ಲಿ ಕೋಟ್ಯಂತರ ರೂ. ಅನುದಾನವನ್ನು ಸರ್ಕಾರದಿಂದ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಉತ್ತಮ ಹೆಸರು ಬಂದಿದ್ದು, ಹೆಚ್ಚಿನ ಅಧಿಕಾರ ಬೇಕಿದೆ ಎಂದರು.
ಸದಸ್ಯ ನಿರಂಜನ್ ಮಾತನಾಡಿ, ಆಕ್ಸಿಜನ್ ದುರಂತದಲ್ಲಿ ಉಸಿರು ಚೆಲ್ಲಿದ ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕೊಡಿಸುವಲ್ಲಿ ಎ.ಆರ್.ಕೃಷ್ಣಮೂರ್ತಿ ಅವರ ಶ್ರಮ ಹೆಚ್ಚಿದೆ ಎಂದರು.
ಶೌಚಗೃಹ ತೊಳಿ ಎಂದಿದ್ದು ಅಕ್ಷಮ್ಯ: ಕಡ್ಡಾಯ ರಜೆ ಮೇಲೆ ತೆರಳಿರುವ ಕೊಳ್ಳೇಗಾಲ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಅವರು ಹೊರಗುತ್ತಿಗೆ ಡಿ ಗ್ರೂಪ್ ನೌಕರರು, ಕಂಪ್ಯೂಟರ್ ಆಪರೇಟರ್‌ಗಳಿಗೆ ಶೌಚಗೃಹ ತೊಳೆಯಿರಿ ಎಂದು ತಾಕೀತು ಮಾಡಿದ್ದು ಅಕ್ಷಮ್ಯ ಎಂದು ಸಮಿತಿ ಅಧ್ಯಕ್ಷ ರಾಜೇಂದ್ರ ಹೇಳಿದರು.
ಘಟನೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಖಂಡಿಸಿದ್ದರಲ್ಲದೆ ಎಚ್ಚರಿಕೆಯನ್ನೂ ನೀಡಿದ್ದರು. ಮೊದಲು ಗುರುಶಾಂತಪ್ಪ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಇವರ ವರ್ತನೆ ಬದಲಾಯಿತು. ನೌಕರರಿಗೆ ಬಾತ್‌ರೂಂ ತೊಳೆಯುವಂತೆ ಹೇಳಿದ್ದು ತಪ್ಪು. ಅದನ್ನು ನಾನು ಸಮರ್ಥಿಸಿ ಕೊಳ್ಳುವುದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕೆ.ರಾಜೇಗೌಡ, ಪಿ.ಕೆ.ಶ್ರೀನಿವಾಸ್‌ಮೂರ್ತಿ, ಶಿವಕುಮಾರ್, ನಿಂಗರಾಜು, ಜೆ.ಹರ್ಷ, ನಿರಂಜನ್, ಶಾಂತರಾಜು, ಕೃಷ್ಣವೇಣಿ, ಸಹನಾಪ್ರಿಯಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net