ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಪಟ್ಟಣದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆ ಆಡಳಿತ ವಿರುದ್ಧ ಪ್ರತಿಭಟಿಸಿ ಪ್ರಭಾರ ಪೌರಾಯುಕ್ತ ನಟರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆ ಆಡಳಿತ ವಿರುದ್ಧ ಪ್ರತಿಭಟಿಸಿ ಪ್ರಭಾರ ಪೌರಾಯುಕ್ತ ನಟರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
Published on
ಕೊಳ್ಳೇಗಾಲ: ನಗರಸಭೆಯ ದುರಾಡಳಿತ, ಭ್ರಷ್ಟಾಚಾರ ಮತ್ತು ವಿಳಂಬ ನೀತಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಬಸ್ ನಿಲ್ದಾಣದಿಂದ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆ ಆಡಳಿತ ವಿರುದ್ಧ ಘೋಷಣೆ ಕೂಗುವ ಮೂಲಕ ಡಾ.ರಾಜಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ನಗರಸಭೆ ಮುಂಭಾಗ ಪ್ರತಿಭಟಿಸಿದರು.
ಬಳಿಕ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜೇಶ್, ಕೊಳ್ಳೇಗಾಲ ನಗರಸಭೆಯಲ್ಲಿ ಲಂಚಕೋರರಿಂದ ಸಕಾಲಕ್ಕೆ ಯಾವುದೇ ರೀತಿಯ ಕೆಲಸಗಳಾಗುತ್ತಿಲ್ಲ. ತಿಂಗಳುಗಟ್ಟಲೆ ಕಚೇರಿಗೆ ನಾಗರಿಕರು ಅಲೆಯುವ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಈ ಬಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಗಮನಹರಿಸಬೇಕು, ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಪ್ರಭಾರ ಪೌರಾಯುಕ್ತ ನಟರಾಜು ಅವರಿಗೆ ನಗರಸಭೆಯ ವ್ಯಾಪ್ತಿಯಲ್ಲಿ ದಿನೇದಿನೆ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳ ಲಂಚಾವತಾರ ಮತ್ತು ಸಾರ್ವಜನಿಕ ಕೆಲಸಗಳಲ್ಲಿನ ತೀವ್ರ ನಿರ್ಲಕ್ಷೃ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು.
ಖಾತೆ ಬದಲಾವಣೆ, ಕಟ್ಟಡ ನಕ್ಷೆ ಮಂಜೂರಾತಿ, ಜನನ-ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಅಗತ್ಯ ಸೇವೆಗಳಿಗಾಗಿ ಅರ್ಜಿ ಸಲ್ಲಿಸಿ ಸಾರ್ವಜನಿಕರು ಅಲೆದಾಡುತ್ತಿದ್ದಾರೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ, ಪ್ರತಿಯೊಂದು ಸಣ್ಣ ಕೆಲಸಕ್ಕೂ ಸಾರ್ವಜನಿಕರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಳ್ಳಲು ಬರುವ ನಾಗರಿಕರನ್ನು ಅನಗತ್ಯವಾಗಿ ಅಲೆದಾಡಿಸಿ ಕಿರುಕುಳ ನೀಡಲಾಗುತ್ತಿದೆ. ಪಟ್ಟಣದ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ಪೂರೈಕೆ, ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ ನಗರಸಭೆ ಕಣ್ಣುಮುಚ್ಚಿ ಕುಳಿತಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕ ಹಣ ಪೋಲಾಗುತ್ತಿದೆ. ನಾಗರಿಕರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಸಾರ್ವಜನಿಕರನ್ನು ಗುಲಾಮರಂತೆ ಕಾಣುತ್ತಿದ್ದಾರೆ. ನಿಯಮಿತ ಅವಧಿಯಲ್ಲಿ ಕೆಲಸ ಮಾಡಿಕೊಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. 15 ದಿನಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಕರವೇ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಲಿಖಿತ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಂ.ರೂಪೇಶ್ ಸಂಘಟನಾ ಕಾರ್ಯದರ್ಶಿ ಹೇಮಂತ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಮೆಹಬೂಬ್ ಪಾಷ, ಚಾಮರಾಜನಗರ ತಾಲೂಕು ಕಾರ್ಯದರ್ಶಿ ಅಸಾದ್, ಉಪಾಧ್ಯಕ್ಷ ಅಭಿಷೇಕ್, ಜಂಟಿ ಕಾರ್ಯದರ್ಶಿ ಶಾಂತರಾಜು, ಕಾರ್ಯದರ್ಶಿ ತಬರೆಸ್ ಪಾಷ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net