ಕೇರಳಂ ಲಾಟರಿ ಮಾರುವವರ ‘ಹೆಡೆಮುರಿ’

 ಗುಂಡ್ಲುಪೇಟೆ ಪಟ್ಟಣದ ವಶ ಪಡಿಸಿಕೊಂಡಿದ್ದ ಕೇರಳಂ ಲಾಟರಿ
ಗುಂಡ್ಲುಪೇಟೆ ಪಟ್ಟಣದ ವಶ ಪಡಿಸಿಕೊಂಡಿದ್ದ ಕೇರಳಂ ಲಾಟರಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಪಿ ಎಂ.ಮುತ್ತುರಾಜು ಸೂಚನೆ ಭರ್ಜರಿ ಕಾರ್ಯಾಚರಣೆ
  • 39 ಜನರ ಬಂಧನ, 5.32 ಲಕ್ಷ ರೂ.ಮೌಲ್ಯದ 10,822 ಲಾಟರಿಗಳ ವಶ
ಚಾಮರಾಜನಗರ: ನೆರೆಯ ಕೇರಳಂ ರಾಜ್ಯದಿಂದ ಲಾಟರಿ ತಂದು ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲಿ ಮಾರಾಟ ಮಾಡುತ್ತಿರುವವರ ಹೆಡೆಮುರಿ ಕಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಭರ್ಜರಿಯಾಗಿ ಸಾಗಿದೆ.
ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕೇರಳಂ ಲಾಟರಿ ಮಾರಾಟ ದಂಧೆ ಇಂದು ನಿನ್ನೆಯದಲ್ಲ. ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧವಾಗುವುದಕ್ಕೂ ಮೊದಲಿನಿಂದಲೂ ಇದೆ. ಲಾಟರಿ ಮಾರಾಟ ಮಾಡುವುದು ಕಾನೂನು ಬಾಹಿರವಾದ ಮೇಲೂ ಮುಂದುವರೆದಿದೆ.
ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯಿಂದ ಪ್ರಕರಣಗಳನ್ನು ದಾಖಲಿಸುತ್ತಾ ಬರಲಾಗಿದೆ. ಆದರೆ ಇವುಗಳ ಸಂಖ್ಯೆ ಕಳೆದ 6 ತಿಂಗಳಿಗೆ ಹೋಲಿಸಿದರೆ ಕಡಿಮೆ ಇವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಬಂದ ನಂತರ ಲಾಟರಿ ಮಾರುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಇದರ ಪರಿಣಾಮ ಆರೋಪಿಗಳ ಬಂಧನ, ಲಕ್ಷಾಂತರ ರೂ.ಮೌಲ್ಯದ ಲಾಟರಿಗಳನ್ನು ವಶ ಪಡಿಸಿಕೊಳ್ಳುವ ಕಾರ್ಯ ಚುರುಕಾಗಿ ನಡೆಯುತ್ತಿದೆ. ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ.
ದಿನಕ್ಕೊಬ್ಬರ ಬಂಧನ, ಲಾಟರಿಗಳು ವಶ:
ಜಿಲ್ಲೆಯಲ್ಲಿ ಕೇರಳಂ ಲಾಟರಿ ಮಾರಾಟ ಮಾಡುವವರನ್ನು ಪೊಲೀಸರು ದಿನಕ್ಕೊಬ್ಬರನ್ನು ಸೆರೆ ಹಿಡಿದು ಪ್ರಕರಣ ದಾಖಲಿಸಲಾಗುತ್ತಿದೆ. ಇದಕ್ಕೂ ಮೊದಲು ಅಂದರೆ, 2024ರಲ್ಲಿ 24, 2025ರಲ್ಲಿ 29 ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಎಸ್ಪಿ ಎಂ.ಮುತ್ತುರಾಜು ಕರ್ತವ್ಯಕ್ಕೆ ಹಾಜರಾದ ನಂತರ ಜನವರಿಂದ ಜೂ.4ವರೆಗೆ 40 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 39 ಜನರನ್ನು ಬಂಧಿಸಲಾಗಿದೆ. ಇವರ ಬಳಿ ಇದ್ದ 5,32,300 ರೂ.ಮೌಲ್ಯದ 10,822 ಲಾಟರಿಗಳು ಮತ್ತು ಆರೋಪಿಗಳು ಇಟ್ಟುಕೊಂಡಿದ್ದ 27500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಗುಂಡ್ಲುಪೇಟೆ ಪ್ರಕರಣ ಗಂಭೀರ ಪ್ರಮಾಣದಿಂದ ಕೂಡಿದೆ. ಪಟ್ಟಣದ ಎಂಡಿಸಿಸಿ ಬ್ಯಾಂಕ್ ಸರ್ಕಲ್‌ನ ಸಾರ್ವಜನಿಕ ಸ್ಥಳದಲ್ಲಿ ಜೂ.3ರಂದು ಅಕ್ರಮವಾಗಿ ಕೇರಳಂ ಲಾಟರಿ ಮಾರಾಟ ಮಾಡುತ್ತಿರುವ ಮಾಹಿತಿ ಆರಕ್ಷಕ ನಿರೀಕ್ಷಕ ಎನ್.ಜಯಕುಮಾರ್‌ಗೆ ತಿಳಿಯುತ್ತದೆ. ಬಳಿಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಆರೋಪಿ ನಾಗರಾಜುನನ್ನು ಸೆರೆ ಹಿಡಿಯಲಾಗಿತ್ತು. ಈತನ ಬಳಿ ಇದ್ದ 1,69,750 ರೂ.ಮೌಲ್ಯದ ಒಟ್ಟು 3395 ಲಾಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿತ್ತು.
ಗುಂಡ್ಲುಪೇಟೆಯಲ್ಲಿ ವ್ಯಾಪಕ:
ಕೇರಳಂ ಗಡಿಯಲ್ಲೇ ಗುಂಡ್ಲುಪೇಟೆ ತಾಲೂಕು ಇರುವ ಕಾರಣಕ್ಕೆ ಅಲ್ಲಿನ ಲಾಟರಿಯ ಮಾರಾಟ ಇಲ್ಲಿ ವ್ಯಾಪಕವಾಗಿದೆ. ಕಳೆದ ತಿಂಗಳು ವರದಿಯಾಗಿರುವ ಕೇರಳಂ ಲಾಟರಿ ಮಾರಾಟ ಪ್ರಕರಣಗಳು ಚಾಮರಾಜನಗರ, ಗುಂಡ್ಲುಪೇಟೆ, ಹನೂರು ತಾಲೂಕುಗಳಲ್ಲಿ ಬೆಳಕಿಗೆ ಬಂದಿವೆ. ಚಾಮರಾಜನಗರ ತಾಲೂಕಿನ ಅಮಚವಾಡಿ, ಹೊಸಮೋಳೆ, ಗೂಳೀಪುರದಲ್ಲಿ ಆರೋಪಿಗಳನ್ನು ಬಂಧಿಸಿ, ಲಾಟರಿಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹನೂರು ತಾಲೂಕಿನ ಚಿಂಚಳ್ಳಿಯಲ್ಲಿ ಲಾಟರಿ ಮಾರಾಟಗಾರನನ್ನು ಬಂಧಿಸಲಾಗಿತ್ತು. ಗುಂಡ್ಲುಪೇಟೆ ತಾಲೂಕಿನಲ್ಲಿ ಪಟ್ಟಣ, ಊಟಿ ಸರ್ಕಲ್, ಮಡಹಳ್ಳಿ ಸರ್ಕಲ್, ಹೊಸೂರಿನಲ್ಲಿ ಲಾಟರಿ ಮಾರುತ್ತಿದ್ದವರನ್ನು ಸೆರೆ ಹಿಡಿಯಲಾಗಿತ್ತು. ಗುಂಡ್ಲುಪೇಟೆ ಪಕ್ಕದಲ್ಲೇ ಇರುವ ಕೇರಳಂಗೆ ಹೋಗಿ ಲಾಟರಿ ತಂದ ಮಾರಾಟ ಮಾಡುವ ದಂಧೆ ಇಲ್ಲಿ ವ್ಯಾಪಾರವಾಗಿ ಬಿಟ್ಟಿದೆ. ಇಲ್ಲಿಂದಲೇ ಬೇರೆ ತಾಲೂಕುಗಳಿಗೆ ಲಾಟರಿ ತಲುಪಿ ಅಲ್ಲಿ ಮಾರಾಟವಾಗುತ್ತಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಆರ್ಥಿಕ ಶೋಷಣೆಯಿಂದ ರಕ್ಷಣೆ:
ಕೇರಳಂ ಲಾಟರಿ ಮಾರಾಟ ಮಾಡುವವರನ್ನು ಸೆರೆ ಹಿಡಿಯಲು ನಡೆಯುತ್ತಿರುವ ಚುರುಕಿನ ಕಾರ್ಯಾಚರಣೆ ದುರ್ಬಲ ವರ್ಗಗಳನ್ನು ಆರ್ಥಿಕ ಶೋಷಣೆಯಿಂದ ರಕ್ಷಣೆ ಮಾಡುತ್ತಿದೆ. ಹಣದ ಆಸೆಗೆ, ರಾತ್ರೋರಾತ್ರಿ ಶ್ರೀಮಂತರಾಗಬಹುದೆಂಬ ಕಲ್ಪನೆಗೆ ದಾಸರಾಗಿ ಲಾಟರಿ ಖರೀದಿ ಮಾಡುವುದು ಚಟವಾಗಿ ಹೋಗಿದೆ. ಸಹಸ್ರಾರು ಜನರಲ್ಲಿ ಯಾರೋ ಒಬ್ಬನಿಗೆ ಲಾಟರಿ ಹೊಡೆದರೆ ಅವರಂತೆಯೇ ಅದೃಷ್ಟ ಕುಲಾಯಿಸಬಹುದೆಂಬ ಯೋಚನೆ ಈ ದಂಧೆಯ ವ್ಯಾಪಾರವನ್ನು ಹೆಚ್ಚು ಮಾಡುತ್ತಿದೆ. ಬಡವರು, ಮಧ್ಯಮವರ್ಗಗಳೇ ಇದರೊಳಗೆ ಸಿಲುಕುತ್ತಿದ್ದಾರೆ. ಇದನ್ನು ತಡೆಗಟ್ಟುವ ಸಲುವಾಗಿಯೇ ಕರ್ನಾಟಕದಲ್ಲಿ ಲಾಟರಿ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಾಗಿದ್ದರೂ ರಾಜ್ಯದ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೇರಳಂನ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಲಾಟರಿ ಮಾರುವವರನ್ನು ಬಂಧಿಸಿ, ಪ್ರಕರಣ ದಾಖಲು ಮಾಡುತ್ತಿರುವುದು ದಂಧೆಯೊಳಗೆ ಸಿಲುಕಿ ಆರ್ಥಿಕ ಸಮಸ್ಯೆ ತಂದುಕೊಳ್ಳುವವರನ್ನು ರಕ್ಷಣೆ ಮಾಡಿದಂತಾಗುತ್ತಿದೆ.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕೇರಳಂ ಲಾಟರಿ ಮಾರಾಟ ಪತ್ತೆ ಮಾಡಿ ಪ್ರಕರಣ ದಾಖಲು ಮಾಡಿಸುತ್ತೇನೆ.
ಎಂ.ಮುತ್ತುರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
ಕೇರಳಂ ಲಾಟರಿ ಮಾರಾಟ ದಂಧೆಗೆ ಕಡಿವಾಣ ಹಾಕಲು ಮಾರಾಟಗಾರರನ್ನು ಹುಡುಕಿ ಪೊಲೀಸರು ಬಂಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಒಂದು ಸಲ ಸಿಕ್ಕಿ ಬಿದ್ದ ಲಾಟರಿ ಮಾರಾಟಗಾರ ಮತ್ತೆ ಲಾಟರಿ ಮಾರಾಟ ಮಾಡಲು ಶುರು ಮಾಡಿ ಸೆರೆ ಸಿಕ್ಕರೆ ಅಂತವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.
ಸಂತೋಷ್, ಪಣ್ಯದಹುಂಡಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net