ಗೋಪಾಲಸ್ವಾಮಿ ಬೆಟ್ಟದಲ್ಲಿ ಯುಗಾದಿ ಜಾತ್ರೆ

ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಜಾತ್ರೆಯ ಅಂಗವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತಿದೆ.
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಜಾತ್ರೆಯ ಅಂಗವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತಿದೆ.
Published on
ಗುಂಡ್ಲುಪೇಟೆ : ಕರ್ನಾಟಕದ ಊಟಿ ಎಂದೇ ಹೆಸರಾದ ನಾಡಿನ ಪ್ರಸಿದ್ದ ಕಣ್ಮನ ತಣಿಸುವ ರಮ್ಯ ತಾಣವಾದ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಯುಗಾದಿ ಜಾತ್ರಾ ಸಂಭ್ರಮ ಆರಂಭವಾಗಿದೆ.
ಮಾ-15ರ ಭಾನುವಾರ ನಡೆಯಲಿರುವ ಯುಗಾದಿ ರಥೋತ್ಸವಕ್ಕಾಗಿ ದಿನ ನಿತ್ಯವೂ ವಿವಿಧ ಪೂಜಾ ಕಾರ್ಯಗಳೊಂದಿಗೆ ಬೆಟ್ಟದಲ್ಲಿ ವಿಶೇಷ ಹೂವಿನ ಅಲಂಕಾರ ಮತ್ತು ಸುಣ್ಣ ಬಣ್ಣದೊಂದಿಗೆ ದೇವಾಲಯ ಸಜ್ಜುಗೊಳ್ಳುತ್ತಿದೆ.
ರಥೋತ್ಸವದ ಹಿನ್ನಲೆಯಲ್ಲಿ ದೇವಾಲಯವು ಬಣ್ಣದಿಂದ ಕಂಗೊಳಿಸುತ್ತಿದೆ. ಗೋಪಾಲಪ್ಪನಿಗೆ ನಾನಾ ವರ್ಣದ ಹೂವುಗಳಿಂದ ಶೃಂಗಾರ ಮಾಡಲಾಗುತ್ತಿದೆ. ಭಾನುವಾರ ರಥೋತ್ಸವವು ಬೆಳಿಗ್ಗೆ ಶುಭ ಅಭಿಜಿನ್ ಲಗ್ನದಲ್ಲಿ ನಡೆಯಲಿದೆ.
ಈ ಹಿನ್ನಲೆಯಲ್ಲಿ ಮಾ. 12ರಿಂದ 18ರವರೆಗೆ ಗೋಪಾಲಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳು
ನೆರವೇರಲಿವೆ ಎಂದು ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ವರ್ಷಪೂರ್ತಿ ಹಿಮದಿಂದ ತಂಪಾಗಿರುವ ಶ್ರೀ ರುಕ್ಷ್ಮಿಣೀ ಸತ್ಯಭಾಮ ಸಹಿತನಾಗಿ ಕೊಳಲು ನುಡಿಸುತ್ತಿರುವ ಭಂಗಿಯಲ್ಲಿ ನಿಂತಿರುವ ಗೋಪಾಲನಿಗೆ ವಿಶೇಷ ಪೂಜಾ ಕೈಂಕಾರ್ಯಗಳು ನಡೆಯಲಿವೆ. ರಥೋತ್ಸವಕ್ಕೆ ರಾಜ್ಯ ಮತ್ತು ನೆರೆ ರಾಜ್ಯಗಳ ವಿವಿಧ ಭಾಗಗಳಿಂದ ಆಗಮಿಸುವ ಭಕ್ತಾಧಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ಸೌಲಭ್ಯವನ್ನು ಮಾಡಲಾಗುತ್ತಿದ್ದು. ಅರಣ್ಯ ಇಲಾಖೆ ಬೆಟ್ಟಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಿದೆ.
ಜಾತ್ರಾ ವಿಶೇಷ:
ಬೆಟ್ಟದಲ್ಲಿ ಸಿಗುವ ಬೊಂಬುಗಳು ಮತ್ತು ದಪ್ಪ ದಪ್ಪ ಹಂಬು(ಬಳ್ಳಿ)ಗಳಿಂದ ತಯಾರಿಸಿದ ಹಗ್ಗದಿಂದ ರಥವನ್ನು ಎಳೆಯುವುದು ಇಲ್ಲಿನ ವಾಡಿಕೆ. ಅಕ್ಕಪಕ್ಕದ ಗ್ರಾಮಸ್ಥರು, ಯುವಕರು ಸೇರಿ ಕಾಡಿನಲ್ಲಿ ಬೆಳೆದ ದಪ್ಪ ದಪ್ಪ ಹಂಬುಗಳಿಂದ ತಯಾರಿಸಿದ ಹಗ್ಗವನ್ನು ಕಟ್ಟಿ ಎಳೆದರೆ ಮಾತ್ರ ರಥ ಮುಂದೆ ಸಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ನೂರಾರು ವರ್ಷಗಳ ಈ ನಂಬಿಕೆ ಇಂದಿಗೂ ಸಹ ಪಾಲನೆ ಮಾಡಲಾಗುತ್ತಿದೆ.
ಸಾರಿಗೆ ಬಸ್ ವ್ಯವಸ್ಥೆ: ಈ ಜಾತ್ರೆಗೆ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿದರೆ ಬೇರಾವುದೇ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬೆಟ್ಟದ ತಪ್ಪಲಿನವರೆಗೆ ಮಾತ್ರ ಖಾಸಗಿ ವಾಹನಗಳು ಸಂಚರಿಸಲು ಅವಕಾಶವಿದ್ದು, ಅಲ್ಲಿ ನಿರ್ಮಿಸಿದ ತಂಗುದಾಣದಲ್ಲಿ ವಾಹನಗಳನ್ನು ನಿಲ್ಲಿಸಬೇಕಾಗಿದೆ. ಇದಕ್ಕಾಗಿ ಸಾರಿಗೆ ಸಂಸ್ಥೆಯು 15 ಬಸ್ಸುಗಳನ್ನು ನಿಯೋಜಿಸಿದೆ. ಪಟ್ಟಣದ ಸಾರಿಗೆ ಬಸ್ ನಿಲ್ದಾಣ, ಗೋಪಾಲಸ್ವಾಮಿಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ ಬಸ್ ಸೌಕರ್ಯ ಕಲ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net