ವಡಕೆಹಳ್ಳ ಗ್ರಾಮದಲ್ಲಿ ಮಕ್ಕಳ ಮಾರಮ್ಮನ ಜಾತ್ರೆ

 ವಡಕೆಹಳ್ಳದಲ್ಲಿ ಶ್ರೀ ಮಕ್ಕಳ ಮಾರಮ್ಮ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರಿಂದ ಬುಧವಾರ ಬಾಯಿಬೀಗ ಸೇವೆ ನೆರವೇರಿತು.
ವಡಕೆಹಳ್ಳದಲ್ಲಿ ಶ್ರೀ ಮಕ್ಕಳ ಮಾರಮ್ಮ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರಿಂದ ಬುಧವಾರ ಬಾಯಿಬೀಗ ಸೇವೆ ನೆರವೇರಿತು.
Published on
ಹನೂರು : ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ಬುಧವಾರ ಮಕ್ಕಳ ಮಾರಮ್ಮನ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರು ದೊಡ್ಡ ಬಾಯಿಬೀಗ ಸೇವೆಯನ್ನು ನೆರವೇರಿಸಿದರು.
ಜಾತ್ರೆಯ ಅಂಗವಾಗಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಅರ್ಚಕರು ಹಾಗೂ ಭಕ್ತರು ದೇವಿಯ ಉತ್ಸವ ಮೂರ್ತಿಯನ್ನು ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ನೀರಿನ ಆಸರೆಯಿರುವ ಸ್ಥಳಕ್ಕೆ ಕೊಂಡೊಯ್ಯಲಾಯಿತು.
ಉತ್ಸವ ಮೂರ್ತಿ ಹಾಗೂ ಕಬ್ಬಿಣದ ಸಲಾಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹರಕೆ ಹೊತ್ತು ಉಪವಾಸವಿದ್ದ ಭಕ್ತರು ಸುಮಾರು 25 ಅಡಿ ಉದ್ದದ ಸಲಾಕೆಯಿಂದ ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡರು. ಮುಖ್ಯ ರಸ್ತೆಯ ಮೂಲಕ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದರ ಮೂಲಕ ಬಾಯಿಬೀಗ ಸೇವೆಯನ್ನು ನೆರವೇರಿಸಿದರು. ಈ ವೇಳೆ ಸಾವಿರಾರು ಭಕ್ತರು ನೆರೆದಿದ್ದರು.
ಜಾತ್ರೆಯ ಹಿನ್ನ್ನೆಲೆಯಲ್ಲಿ ವಡಕೆಹಳ್ಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆಯುವುದರ ಜತೆಗೆ ಹಣ್ಣು ಕಾಯಿ ನೀಡಿ ದೇವರ ದರ್ಶನ ಪಡೆದರು. ದೇಗುಲದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net