ವಿಜೃಂಭಣೆಯ ಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವ

ಹನೂರಿನ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ತೆರಳಿದರು.
ಹನೂರಿನ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ತೆರಳಿದರು.
Published on
ಹನೂರು : ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವದಲ್ಲಿ ಬುಧವಾರ ಬಿಸಿಲಿನ ಬೇಗೆಯ ನಡುವೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಹಿಳೆಯರು ಸೇರಿದಂತೆ ಹರಕೆ ಹೊತ್ತ 89 ಭಕ್ತರು ದೊಡ್ಡ ಬಾಯಿಬೀಗ ಸೇವೆಯನ್ನು ನೆರವೇರಿಸಿ ಭಕ್ತಿ ಪರಿಕಾಷ್ಠೆ ಮೆರೆದರು.
ಜಾತ್ರಾ ಮಹೋತ್ಸವದಲ್ಲಿ ಬಾಯಿಬೀಗ ಸೇವೆಯು ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಬಾಯಿಬೀಗ ಹಾಕಿಸಿಕೊಂಡು ಸೇವೆ ಸಲ್ಲಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ದಿನದ ಹಿಂದೆಯೇ ಬಾಯಿಬೀಗ ಹಾಕಿಸಿಕೊಳ್ಳಲು ಹರಕೆ ಹೊತ್ತಿದ್ದ 89 ಭಕ್ತರು ಮಾಲೆಯನ್ನು ಧರಿಸಿ ದಿನನಿತ್ಯ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದರು. ಬುಧವಾರ ಉಪವಾಸ ಕೈಗೊಂಡಿದ್ದು, ಮಧ್ಯಾಹ್ನ 2ರ ವೇಳೆಯಲ್ಲಿ ಪಟ್ಟಣದ ಆಂಜನೇಯಸ್ವಾಮಿ ದೇಗುಲದ ಬಳಿ ಅರ್ಚಕರಿಂದ ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡರು.
ಮೆರವಣಿಗೆ:
ಬೆಳಗ್ಗೆ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಕಬ್ಬಿಣದ ಸಲಾಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಆಂಜನೇಯ ಸ್ವಾಮಿ ದೇಗುಲದ ಬಳಿ ಬಾಯಿಬೀಗ ಹಾಕುವ ಅರ್ಚಕರು ಕಬ್ಬಿಣದ ಸಲಾಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಹರಕೆ ಹೊತ್ತಿದ್ದ ಭಕ್ತರಿಗೆ ಅರಿಶಿನ ಮಿಶ್ರಿತ ನೀರನ್ನು ಮೈಮೇಲೆ ಸುರಿದು 20 ಅಡಿ ಉದ್ದದ ಸರಳಿನಿಂದ ಬಾಯಿಬೀಗವನ್ನು ಹಾಕಲಾಯಿತು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತರು ಕುತೂಹದಿಂದ ವೀಕ್ಷಿಸಿ ಕಣ್ತುಂಬಿಕೊಂಡರು. ಬಾಯಿಬೀಗವನ್ನು ಹಾಕಿಸಿಕೊಂಡ ಭಕ್ತರನ್ನು ವಾದ್ಯಮೇಳದೊಂದಿಗೆ ಆಂಜನೇಯಸ್ವಾಮಿ ದೇಗುಲದಿಂದ ಹಳೆ ಎಂಡಿಸಿಸಿ ರಸ್ತೆ ಹಾಗೂ ಪಟ್ಟಣದ ಬಸ್ ನಿಲ್ದಾಣದ ಮೂಲಕ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಕರೆ ತರಲಾಯಿತು.
ದೇಗುಲದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಹರಕೆಯನ್ನು ತೀರಿಸುವುದರ ಮೂಲಕ ಭಕ್ತಿಪರಿಕಾಷ್ಠೆ ಮೆರೆದರು. ಈ ವೇಳೆ ಬಾಯಿಬೀಗ ಸೇವೆಯನ್ನು ವಿಕ್ಷೀಸಲು ದಾರಿಯುದ್ದಕ್ಕೂ ನೆರೆದಿದ್ದ ಜನರು ಬಿಸಿಲಿನ ಬೇಗೆಗೆ ಬಸವಳಿದರು. ಜನರನ್ನು ಚದುರಿಸಲು ಪೋಲಿಸರು ರಸ್ತೆಯುದ್ದಕ್ಕೂ ಹರಸಾಹಸ ಪಟ್ಟರು. ಮೆರವಣಿಗೆಯೂ ಸುಮಾರು 3 ಗಂಟೆಗಳ ಕಾಲ ನಡೆಯಿತು. ಇದರಿಂದ ಬಸ್ ನಿಲ್ದಾಣದ ಬಳಿ ಸುಮಾರು 1 ಗಂಟೆ ಕಾಲ ಸಂಚಾರ ವ್ಯತ್ಯಯ ವಾಗಿತ್ತು.
ಬಿಸಿಲಿನ ಬೇಗೆಯ ನಡುವೆಯೂ ಸೇವೆ:
ಹರಕೆ ಹೊತ್ತ ಭಕ್ತರು ದೊಡ್ಡ ಬಾಯಿಬೀಗವನ್ನು ಹಾಕಿಸಿಕೊಂಡರಲ್ಲದೇ ಸಾವಿರಾರು ಭಕ್ತರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಸಿಲಿನ ಬೇಗೆಯ ನಡುವೆಯೂ ಸಣ್ಣ ಬಾಯಿಬೀಗವನ್ನು ಹಾಕಿಸಿಕೊಂಡು ಸೇವೆ ನೆರವೇರಿಸಿದರು. ಬಳಿಕ ಭಕ್ತರು ಆಂಜನೇಯಸ್ವಾಮಿ ದೇಗುಲದಿಂದ ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ವಿಶೇಷ ಪೂಜೆಯೊಂದಿಗೆ ಹರಕೆಯನ್ನು ತೀರಿಸಿದರು.
ಮಾಂಸದ ವ್ಯಾಪಾರ ಜೋರು:
ಜಾತ್ರೆಗೆ ಚಾಲನೆ ನೀಡಿದ 15 ದಿನದಿಂದ ಪಟ್ಟಣದಲ್ಲಿ ಮಾಂಸಾಹಾರವನ್ನು ತ್ಯಜಿಸಲಾಗಿತ್ತು. ಹಾಗಾಗಿ ಪಟ್ಟಣದಲ್ಲಿ ಮಾಂಸಹಾರಿ ಹೋಟೆಲ್ ಸೇರಿದಂತೆ ಮಾಂಸದ ಅಂಗಡಿಗಳು ಬಂದ್ ಆಗಿದ್ದವು. ಆದರೆ ಬುಧವಾರ ಬಾಡೂಟದ ಅತಿಥ್ಯ ಇದ್ದ ಹಿನ್ನಲೆ ಬೆಳಗ್ಗೆ ಜನರು ಮಾಂಸವನ್ನು ಖರೀದಿಸಲು ಸ್ಟಾಲ್‌ಗಳಿಗೆ ಮುಗಿಬಿದ್ದರು. ಹಾಗಾಗಿ ಪಟ್ಟಣದಲ್ಲಿ ಮಾಂಸದ ವ್ಯಾಪಾರ ಬಲು ಜೋರಾಗಿಯೇ ನಡೆಯಿತು.
ಅನ್ನ ಸಂತರ್ಪಣೆ:
ಬಾಯಿಬೀಗ ಸೇವೆ ಹಿನ್ನಲೆ ನೆಂಟರಿಸ್ಟರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗ ಉಪ್ಪು ಸುರಿದು ನಮಿಸಿದರು. ಕೆಲ ಭಕ್ತರು ದೇವಿಗೆ ನಗದು ಕಾಣಿಕೆ, ದವಸ ಧಾನ್ಯ, ಚಿನ್ನ, ಬೆಳ್ಳಿ ಹಾಗೂ ಸೀರೆ ನೀಡುವುದರ ಮೂಲಕ ಹರಕೆ ತೀರಿಸಿದರು. ದೇಗುಲದ ಆಡಳಿತ ಮಂಡಳಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net