ಬಜೆಟ್‌ನಲ್ಲಿ 490 ಕೋಟಿ ರೂ ನೀರಾವರಿಗೆ ನೀಡಿರುವುದು ಸಂತಸ

 ಹನ್ನೂರಿನ ಉಡುತೊರೆಹಳ್ಳ ನೀರಾವರಿ ಯೋಜನೆ ಬಜೆಟ್‌ನಲ್ಲಿ ಘೋಷಣೆಯಾದ ಹಿನ್ನೆಲೆ ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗೌಡೇಗೌಡ, ಅಮ್ಜಾದ್‌ಖಾನ್, ವೆಂಕಟಾಚಲ ಇತರರಿದ್ದರು.
ಹನ್ನೂರಿನ ಉಡುತೊರೆಹಳ್ಳ ನೀರಾವರಿ ಯೋಜನೆ ಬಜೆಟ್‌ನಲ್ಲಿ ಘೋಷಣೆಯಾದ ಹಿನ್ನೆಲೆ ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗೌಡೇಗೌಡ, ಅಮ್ಜಾದ್‌ಖಾನ್, ವೆಂಕಟಾಚಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಅಭಿಮತ
  • ತಾಲೂಕಿನಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ
ಹನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ 490 ಕೋಟಿ ರೂ., ವೆಚ್ಚದ ಹನೂರು ತಾಲೂಕಿನ ಉಡುತೊರೆಹಳ್ಳ ನೀರಾವರಿ ಯೋಜನೆಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದ ಬಳಿ ನೆರೆದಿದ್ದ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಸರ್ಕಾರದ ಬಗ್ಗೆ ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಪಟಾಕಿ ಸಿಡಿಸಿ ಸಂತಸ ಪಟ್ಟರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್ ಮಾತನಾಡಿ, ಹನೂರು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಕೆರೆ, ಕಟ್ಟೆ ಹಾಗೂ ಇನ್ನಿತರೆ ನೀರಿನ ಮೂಲಗಳು ಬತ್ತಿ ಹೋಗುತ್ತಿತ್ತು. ಇದರಿಂದ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ಪ್ರತಿ ವರ್ಷ ಕೃಷಿ ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಇತ್ತು. ಕೆರೆಗಳಿಗೆ ನೀರು ತುಂಬಿಸುವಂತೆ ತಹಸೀಲ್ದಾರ್ ಕಚೇರಿ ಹಾಗೂ ನೀರಾವರಿ ಕಚೇರಿ ಮುಂಭಾಗ ಸಂಘಟನೆಯ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಜತೆಗೆ ಹನೂರಿನಿಂದ ಬೈಕ್ ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಜ. 28 ರಂದು ನೂರಾರು ರೈತರು ಅಜ್ಜೀಪುರ ಗ್ರಾಮದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದೇವು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ನಮ್ಮೊಂದಿಗೆ ಚರ್ಚಿಸಿ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಭರವಸೆಯನ್ನು ನೀಡಿದ್ದರು. ಅದರಂತೆಯೇ 490 ಕೋಟಿ ರೂ ವೆಚ್ಚದ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಘೋಷಣೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಪಿಎಸಿಸಿ ನಿರ್ದೇಶಕ ಜೆಡಿಎಸ್ ಮುಖಂಡ ಮಂಜೇಶ್ ಮಾತನಾಡಿ, ರೈತರಿಗೆ ಸಮರ್ಪಕ ನೀರಾವರಿ ಯೋಜನೆಯನ್ನು ಒದಗಿಸಿಬೇಕು ಎನ್ನುವುದು ಶಾಸಕ ಎಂ.ಆರ್ ಮಂಜುನಾಥ್ ಅವರ ಪ್ರಮುಖ ಒತ್ತಾಸೆ. ಈ ದೆಸೆಯಲ್ಲಿ ಇವರ ಶ್ರಮ ಅಪಾರ. ಇವರು ಕಳೆದ ತಿಂಗಳು ಹಲವು ವರ್ಷಗಳ ಬೇಡಿಕೆಯ ಕನಸು ರಾಮನಗುಡ್ಡೆ ಕೆರೆಗೆ ಕಾವೇರಿ ನೀರನ್ನು ತುಂಬಿಸುವುದರ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಇನ್ನು ಉಡುತೊರೆಹಳ್ಳ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಇನ್ನಿಲ್ಲದ ಶ್ರಮ ಹಾಕಿದ್ದರು. ಬಜೆಟ್‌ನಲ್ಲಿ ಅನುಮೋದನೆ ದೊರಕಿರುವುದು ಶ್ರಮಕ್ಕೆ ಸಂದ ಪ್ರತಿಫಲ. ಇದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದ ರೈತರು ಹಾಗೂ ಜನರು ಎದುರಿಸುತ್ತಿದ್ದ ನೀರಿನ ಬವಣೆ ನೀಗಲಿದೆ ಎಂದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ, ರೈತ ಮುಖಂಡರಾದ ಪಳನಿಸ್ವಾಮಿ, ವೆಂಕಟಾಚಲ, ಜೆಡಿಎಸ್ ಮುಖಂಡರಾದ ವಿಜಯಕುಮಾರ್, ಜೆಸ್ಸಿಂಪಾಷ, ಚಿನ್ನವೆಂಕಟ, ರಂಗಯ್ಯ, ಗೋವಿಂದ ಹಾಗೂ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net