ಅಕ್ರಮ ಮದ್ಯ ಮಾರಾಟ ತಡೆ ಅಸಾಧ್ಯ

ಹನೂರು ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡಸಿದ್ದರು.
ಹನೂರು ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಿರಾಣಿ ಅಂಡಿಗಳಲ್ಲೂ ಎಣ್ಣೆ ಲಭ್ಯ
  • ಓಪನ್ ಬಾರ್ ಆಗಿರುವ ಸಾರ್ವಜನಿಕ ಸ್ಥಳಗಳು
ಚಾಮರಾಜನಗರ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪ್ರಕರಣ ದಾಖಲು ಮಾಡಿದರೂ ಮುಂದುವರೆಯುತ್ತಿದೆ.
ಜಿಲ್ಲಾ ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಅಕ್ರಮ ಮದ್ಯ ಮಾರಾಟ ತಡೆಗಾಗಿ 2025ರ ಜುಲೈನಿಂದ 2026ರ ಮೇವರೆಗೆ ಒಟ್ಟು 1,857 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 75 ೋರ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಒಟ್ಟು 22256.195 ಲೀಟರ್ ಮದ್ಯ, 9074.95 ಲೀಟರ್ ಬಿಯರ್, 91 ಲೀಡರ್ ಸೇಂದಿಯನ್ನು ಜಪ್ತಿ ಮಾಡಲಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ 255 ದಾಳಿಗಳನ್ನು ನಡೆಸಿ 18 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ 625 ದಾಳಿ ಮತ್ತು 21 ಪ್ರಕರಣ, ಗುಂಡ್ಲುಪೇಟೆ ತಾಲೂಕಿನಲ್ಲಿ 434 ದಾಳಿ ಹಾಗೂ 10 ಪ್ರಕರಣ, ಚಾಮರಾಜನಗರ ಉಪ ವಿಭಾಗದಲ್ಲಿ 327 ದಾಳಿ ಮತ್ತು 13 ಪ್ರಕರಣ, ಜಿಲ್ಲಾ ಸ್ಕಾೃಡ್‌ನಿಂದ 216 ದಾಳಿ ಹಾಗೂ 13 ಪ್ರಕರಣಗಳನ್ನು ಹೂಡಲಾಗಿದೆ.
ಕಳೆದ ವರ್ಷವೂ ಇದೇ ಮಾದರಿಯಲ್ಲಿ ದಾಳಿಗಳು ನಡೆದಿವೆ. ಪ್ರಕರಣಗಳೂ ಸಹ ದಾಖಲಾಗಿವೆ.
ಆದರೆ ಮುಂದಿನ ವರ್ಷಕ್ಕೆ ಅಕ್ರಮ ಮದ್ಯ ಮಾರಾಟ ಮುಂದುವರೆಯುತ್ತಿದೆಯೇ ಹೊರತು ಸ್ಥಗಿತಗೊಳ್ಳುತ್ತಿಲ್ಲ. ಹೀಗಾಗಿ ಇದಕ್ಕೆ ಕೊನೆಯೇ ಇಲ್ಲ ಎಂದು ಖಚಿತವಾಗಿ ಹೇಳಬಹುದಾಗಿದೆ.
ಬೆಳ್ಳಂಬೆಳಗ್ಗೆಯೇ ಮದ್ಯಸೇವನೆ: ಅಕ್ರಮ ಮದ್ಯ ಮಾರಾಟ ಮುಂಜಾನೆಯಿಂದ ಕತ್ತಲರಾತ್ರಿಯವರೆಗೂ ನಡೆಯುತ್ತಿರುವುದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೂರದ ಬಾರ್, ವೈನ್ಸ್ ಸ್ಟೋರ್‌ಗಳಿಂದ ಮದ್ಯ ತಂದು ಊರಿನ ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂಜಾನೆ ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕ ಬೆಳಗ್ಗೆ 10 ಗಂಟೆಗೆ ಬಾಗಿಲು ತೆರೆಯುವ ಬಾರ್, ವೈನ್ಸ್‌ಸ್ಟೋರ್‌ಗಳನ್ನೇ ಕಾಯದೆ ಕಿರಾಣಿ ಅಂಗಡಿಯಲ್ಲಿ ಮದ್ಯ ಖರೀದಿ ಮಾಡುತ್ತಿದ್ದಾನೆ. ಮುಂಜಾನೆಯೇ ಮದ್ಯ ಸೇವನೆ ಮಾಡುತ್ತಿರುವ ಶ್ರಮಿಕನ ಆರೋಗ್ಯ ಹಾಳಾಗುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಮೊದಲೇ ಅಪೌಷ್ಠಿಕತೆಯಿಂದ ಬಳಲುತ್ತಿರುವ ವನವಾಸಿಗಳು ಮದ್ಯದ ಚಟಕ್ಕೆ ದಾಸರಾಗಿ ಅನಾರೋಗ್ಯಕ್ಕೆ ಕುತ್ತಾಗುತ್ತಿದ್ದಾರೆ. ಹಾಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೆ ಗಲಾಟೆ ಮಾಡಿರುವ ಪ್ರಸಂಗವೂ ನಡೆದಿದೆ. ಇದನ್ನು ವಿರೋಧಿಸಿ ಸೋಲಿಗ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು.
ಕೆಲವು ಗ್ರಾಮಗಳು ಮಾದರಿ:
ಸರ್ಕಾರದೊಂದಿಗೆ ಗ್ರಾಮಸ್ಥರೂ ಕೈಜೋಡಿಸಿದರೆ ಮಾತ್ರ ಅಕ್ರಮ ಮದ್ಯ ಮಾರಾಟ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕೆಲವು ಗ್ರಾಮಗಳು ಮಾದರಿಯಾಗಿವೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಗ್ರಾಮಗಳಲ್ಲಿ ಗ್ರಾಮಸ್ಥರು ಸಭೆ ಸೇರಿ ನ್ಯಾಯ ಪಂಚಾಯಿತ ಮಾಡಿ ಇನ್ನು ಮುಂದೆ ಊರಲ್ಲಿ ಅಕ್ರಮ ಮದ್ಯ ಮಾರಾಟ ಮಾಡಬಾರದು ಎಂದು ತೀರ್ಮಾನ ಮಾಡಿದ್ದಾರೆ. ಇಂತಹ ಗ್ರಾಮಗಳಲ್ಲಿ ಇಂದಿಗೂ ಸಹ ಅಕ್ರಮ ಮದ್ಯ ಮಾರಾಟ ನಡೆಯುತ್ತಿಲ್ಲ. ಇಂತಹ ಗ್ರಾಮಗಳ ಸಂಖ್ಯೆ ಹೆಚ್ಚಳವಾದರೆ ಮಾತ್ರ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಬೀಳಲು ಸಾಧ್ಯ.
ಕೊಳ್ಳೇಗಾಲದಲ್ಲಿ ಓಪನ್ ಬಾರ್:
ಖಾಲಿ ನಿವೇಶನಗಳು, ಜನವಸತಿ ಇಲ್ಲದ ಪ್ರದೇಶಗಳು, ಮೈದಾನ, ಪ್ರಾಕೃತಿಕ ತಾಣಗಳು ಓಪನ್ ಬಾರ್‌ಗಳಾಗಿಬಿಟ್ಟಿವೆ. ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಕುಡುಕರ ಅಡ್ಡೆಗಳಾಗಿಬಿಟ್ಟಿವೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಕೊಳ್ಳೇಗಾಲದಲ್ಲಿ ಈ ರೀತಿ ಪಾನಗೋಷ್ಠಿಗಳು ನಡೆಯುತ್ತಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವವ ವಿರುದ್ದ ಅಬಕಾರಿ ಇಲಾಖೆ ಕ್ರಮಕೈಗೊಂಡಿದೆ. 2025ರ ಜುಲೈರಿಂದ 2026ರ ಮೇವರೆಗೆ ಕೊಳ್ಳೇಗಾಲ ತಾಲೂಕಿನಲ್ಲಿ 186 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಇದೇ ಅಧಿಕ. ಉಳಿದಂತೆ ಚಾಮರಾಜನಗರ ತಾಲೂಕಿನಲ್ಲಿ 176, ಗುಂಡ್ಲುಪೇಟೆ-174, ಚಾಮರಾಜನಗರ ಉಪ ವಿಭಾಗ-166 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ನೀರಿಗಿರುವ ಬರ ಮದ್ಯಕ್ಕಿಲ್ಲ:
ಹನೂರು ತಾಲೂಕಿನಲ್ಲಿ ಅಕ್ರಮ ಮದ್ಯದ ಘಾಟು ಎಷ್ಟರ ಮಟ್ಟಿಗೆ ಇದೆ ಎಂದರೆ, ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಅಂತರ್ಜಲಮಟ್ಟ ಕುಸಿದು ಹೋಗಿ ಕುಡಿಯಲು ನೀರಿನ ಸಮಸ್ಯೆ ಇದೆ. ಆದರೆ ಅಕ್ರಮ ಮದ್ಯ ಮಾರಾಟ ಬೇರೂರಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ವೆಂಕಟೇಶ್ ಮೇ 16ರಂದು ಗ್ರಾಮಕ್ಕೆ ಸಾರ್ವಜನಿಕರಿಂದ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಆಲಿಸಿದ್ದರು. ಈ ವೇಳೆ ನೀರಿನ ಅಭಾವವನ್ನು ಹೇಳಿಕೊಂಡ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಎಂದು ಕೇಳಿಕೊಂಡಿದ್ದರು. ಸಚಿವರಾಗಿದ್ದ ಕೆ.ವೆಂಕಟೇಶ್ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸಲು ತಿಳಿಸಿದ್ದರು.
ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಗೊತ್ತಾದರೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲಿ. ನಾವು ದೂರುದಾರರ ವಿವರವನ್ನು ಬಹಿರಂಗಪಡಿಸದೆ ಅವರ ವಿರುದ್ಧ ಕ್ರಮವಹಿಸುತ್ತೇವೆ.
ಪ್ರದೀಪ್, ಅಬಕಾರಿ ಅಧೀಕ್ಷಕ, ಅಬಕಾರಿ ಇಲಾಖೆ, ಚಾಮರಾಜನಗರ
ಹಾಡಿ, ಪೋಡುಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಇನ್ನು ನಿಲ್ಲಸಬೇಕೆಂದು ಧರಣಿ ಮಾಡಿ ಮನವಿ ಕೊಟ್ಟಿದ್ದೆವು. ಅಬಕಾರಿ ಇಲಾಖೆ, ಪೊಲೀಸರು ಹಳ್ಳಿಗಳಲ್ಲಿ ದಾಳಿಗಳನ್ನು ಹೆಚ್ಚು ಮಾಡಬೇಕು. ಮಾರಾಟಗಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.
ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net