ಕಾಣೆಯಾದವರ ಲೋಕದೊಳಗೆ..!

ಡಾ.ಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಿಎಸ್‌ಎಸ್‌ಐ ಕೇಂದ್ರ, ಮೈಸೂರು ವಿವಿ
ಡಾ.ಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಿಎಸ್‌ಎಸ್‌ಐ ಕೇಂದ್ರ, ಮೈಸೂರು ವಿವಿ
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿ ಸಿಎಸ್‌ಎಸ್‌ಐನಿಂದ ಜಿಲ್ಲೆಯ ನಾಪತ್ತೆ ಕೇಸ್‌ಗಳ ವಿಶ್ಲೇಷಣೆ
  • ಶೇ.55ರಷ್ಟು 16-18ರ ವಯಸ್ಸಿನವರ ಅದೃಶ್ಯ ಹೆಚ್ಚಳ
ಡಾ.ಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಿಎಸ್‌ಎಸ್‌ಐ ಕೇಂದ್ರ, ಮೈಸೂರು ವಿವಿ

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಕಾಣೆಯಾದವರ ಲೋಕದೊಳಗೆ ವ್ಯಕ್ತಿ ಜೀವನದ ಸಂಕ್ರಮಣ ಕಾಲವೆಂದೇ ಪರಿಭಾವಿಸುವ ಕಿಶೋರಾವಸ್ಥೆಯ ಕುರುಳ ಬಳ್ಳಿಗಳ ನಾಪತ್ತೆ ಪ್ರಕರಣಗಳು ಅಧಿಕವಾಗಿ ಕಳವಳ ಹುಟ್ಟುಹಾಕಿದೆ..!
ಮೈಸೂರು ವಿಶ್ವ ವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ (ಸಿಎಸ್‌ಎಸ್‌ಐ) ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಮತ್ತು ತಂಡ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದ (ಎನ್‌ಸಿಆರ್‌ಬಿ) 2024ರ ದಾಖಲೆಗಳನ್ನು ವಿಶ್ಲೇಷಣೆ ಮಾಡಿದಾಗ ಜಿಲ್ಲೆಯಲ್ಲಿ 16-18 ವರ್ಷ ವಯಸ್ಸಿನ ಹೆಣ್ಣು ಮತ್ತು ಗಂಡು ಮಕ್ಕಳೇ ಹೆಚ್ಚು ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿರುವ ಅಂಕಿ-ಅಂಶ ಬೆಳಕಿಗೆ ಬಂದಿದೆ.
2024ರಲ್ಲಿ ಒಟ್ಟು 450 ಜನರು ಕಾಣೆಯಾದ ಮೊಕದ್ದಮೆಗಳು ದಾಖಲಾಗಿವೆ. ಇವುಗಳಲ್ಲಿ 293 ಮಹಿಳೆಯರು, 157 ಪುರುಷರು ನಾಪತ್ತೆಯಾದ ಕೇಸ್‌ಗಳು ದಾಖಲಾಗಿವೆ. ಮಹಿಳೆಯರ ಪ್ರಮಾಣ ಪುರುಷರಿಗಿಂತ ಎರಡು ಪಟ್ಟು ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ. ಮಕ್ಕಳ ವಿಷಯಕ್ಕೆ ಬಂದರೆ, 49 ಮಕ್ಕಳು ಕಾಣೆಯಾಗಿರುವ ದೂರು ಸಲ್ಲಿಕೆಯಾಗಿವೆ. ಇದನ್ನು ವಯೋಮಾನದ ವಿಶ್ಲೇಷಣೆಯಲ್ಲಿ ನೋಡಿದಾಗ, ಶೇ.12.2ರಷ್ಟು ಮಕ್ಕಳು 12 ವರ್ಷಕ್ಕಿಂತ ಕಡಿಮೆ ವಯಸ್ಸಿನವವರು. ಶೇ.33 ಮಕ್ಕಳು 12-16 ವರ್ಷದೊಳಗಿನವರಾಗಿದ್ದು, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ, ಶೇ.55 ಮಕ್ಕಳು 16-18 ವರ್ಷದೊಳಗಿನರಾಗಿದ್ದಾರೆ. ಲಿಂಗಾಧಾರಿತವಾಗಿ ಹೇಳುವುದಾದರೆ 25 ಹುಡುಗರು ಮತ್ತು 24 ಹುಡುಗಿಯರು ಕಾಣೆಯಾಗಿದ್ದು, ಈ ವರ್ಗದಲ್ಲಿ ಸಮಾನ ಪ್ರಮಾಣ ಕಂಡುಬಂದಿದೆ.
16-18ರ ಹದಿಹರೆಯದ ವಯಸ್ಸಿನ ಶೇ.55ರಷ್ಟು ಮಕ್ಕಳು ಕಾಣೆಯಾಗಲು ಕೆಲವು ಕಾರಣಗಳ ಮೇಲೆ ಗಮನ ಹರಿಸಲಾಗಿದೆ. ಇವು ಕೌಟುಂಬಿಕ ಒತ್ತಡ, ಸ್ನೇಹಿತರ ಸಮಸ್ಯೆ, ಅರ್ಧದಲ್ಲೇ ಶಾಲೆ ಬಿಡುವುದು, ಪ್ರೇಮ ಸಂಬಂಧಗಳು ಮತ್ತು ಸಾಮಾಜಿಕ ಒತ್ತಡಗಳು ಪ್ರಮುಖ ಕಾರಣಗಳಾಗಿರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಒಟ್ಟಾರೆಯಾಗಿ ಈ ಅಂಕಿ- ಅಂಶಗಳು ಕೇವಲ ಸಂಖ್ಯೆಗಷ್ಟೇ ಸೀಮಿತವಾಗದೇ, ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಸಾಮಾಜಿಕ ವಾಸ್ತವಿಕತೆಯನ್ನು ಪ್ರತಿಬಿಂಬಿಸುವ ಗಂಭೀರ ಸೂಚಕಗಳಾಗಿವೆ. ಜಿಲ್ಲೆಯಲ್ಲಿ ಹೆಚ್ಚಿನ ದೇವಸ್ಥಾನಗಳಿದ್ದು, ಬೇರೆಡೆಯಿಂದ ಬರುವ ಭಕ್ತಾಧಿಗಳು ಸಹ ಕಾಣೆಯಾಗುತ್ತಿರುವುದು ಚಿಂತಿಸಬೇಕಾದ ವಿಚಾರ.
ಸಮನ್ವತೆಯ ಸಲಹೆ:
ಈ ಸಮಸ್ಯೆಯನ್ನು ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಪೊಲೀಸ್ ಇಲಾಖೆ ಮತ್ತು ಗ್ರಾಮೀಣ ಮಟ್ಟದ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಜತೆಗೆ, ಕಿಶೋರ ವಯಸ್ಸಿನವರಿಗಾಗಿ ಜಾಗೃತಿ ಕಾರ್ಯಕ್ರಮಗಳು ಮತ್ತು ಸಲಹಾ ಕೇಂದ್ರಗಳನ್ನು ಬಲಪಡಿಸುವ ಅಗತ್ಯವೂ ಇದೆ. ಹೆಚ್ಚಾದ ಮೊಬೈಲ್ ಬಳಕೆ ಒಂಟಿತನ, ಹಣಕಾಸಿನ ಒತ್ತಡ, ಸ್ವ ಅಸ್ಮಿತೆಯ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ಡಾ.ಡಿ.ಸಿ. ನಂಜುಂಡ ಹೇಳುತ್ತಾರೆ.
ವ್ಯವಸ್ಥೆಯಲ್ಲಿ ಕೊರತೆಯ ಸೂಚಕ:
ದೈಹಿಕವಾಗಿ ಮತ್ತು ಮಾನಸಿಕವಾಗಿ ರೂಪಾಂತಗೊಂಡು ಲಿಂಗತ್ವ ಅಲ್ಪಸಂಖ್ಯಾತರಾಗಿ ಬದಲಾಗುವ ಹೊಸ ಹುಟ್ಟನ್ನು ಒಡಲ ಹುಟ್ಟಿನ ವಾತಾವರಣ ತಿರಸ್ಕಾರದಿಂದ ನೋಡುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ತನ್ನನ್ನು ಒಪ್ಪುವ ಹಾದಿ ಹಿಡಿಯುವ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರು ಮೂಲ ನಿವಾಸದಿಂದ ದೂರವಾಗಿಬಿಡುತ್ತಾರೆ. ಅಸ್ವಿತ್ವವಿಲ್ಲದ ಬದುಕಿನಲ್ಲಿ ಅನಾಥ ಪ್ರಜ್ಞೆಯೊಂದಿಗೆ ತಮ್ಮದೇ ಲೋಕದಲ್ಲಿ ಉಳಿದುಬಿಡುತ್ತಾರೆ. ಇವರನ್ನು ಹುಡುಕಿಕೊಡಲು ದೂರು ಕೊಡುವ ಕಾಳಜಿ ಯಾರಿಗಾದರೂ ಇದೆಯೇ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಇವರು ಕಾಣೆಯಾದ ಕುರಿತು ಅಂಕಿ-ಅಂಶಗಳನ್ನೂ ಮೈಸೂರು ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಮತ್ತು ತಂಡ ವಿಶ್ಲೇಷಣೆ, ಲೈಂಗಿಕ ಅಲ್ಪಸಂಖ್ಯಾತರ ವರ್ಗದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ಇದು ಈ ವರ್ಗದವರ ಕಾಣೆಯಾದ ಪ್ರಕರಣಗಳು ಇಲ್ಲವೆಂದು ಸೂಚಿಸುವುದಕ್ಕಿಂತ, ದಾಖಲೆ ಮತ್ತು ವರದಿ ಮಾಡುವ ವ್ಯವಸ್ಥೆಯಲ್ಲಿನ ಕೊರತೆಯನ್ನು ಸೂಚಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
"

ಈ ಅಂಕಿ-ಅಂಶಗಳು ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ, ವಲಸೆ, ಕುಟುಂಬ ಕಲಹ, ಸಾಮಾಜಿಕ ಮಾಧ್ಯಮಗಳ ಸೆಳೆತ ಮತ್ತು ಮಾನವ ಕಳ್ಳಸಾಗಣೆ ಮೊದಲಾದ ಸಮಸ್ಯೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಸಾಧ್ಯತೆಯನ್ನು ತೋರಿಸುತ್ತವೆ. ವಿಶೇಷವಾಗಿ ವಯಸ್ಕ ಮಹಿಳೆಯರು ಮತ್ತು ಕಿಶೋರರು ಕಾಣೆಯಾಗುತ್ತಿರುವ ಪ್ರಮಾಣ ಹೆಚ್ಚಿರುವುದು ಆತಂಕಕಾರಿ ವಿಚಾರ. ಶಾಲಾ-ಕಾಲೇಜು ಮಟ್ಟದಲ್ಲಿ ಇದರ ಕುರಿತು ಹೆಚ್ಚಿನ ಅರಿವು ಬೇಕಾಗಿದೆ. ಮಾಧ್ಯಮಗಳ ಪಾತ್ರ ಸಹ ಇಲ್ಲಿ ಮುಖ್ಯ. ಜಿಲ್ಲೆಯಲ್ಲಿ ಮಾನಸಿಕ ರೋಗ ತಜ್ಞರ ಕೊರತೆ ಇದೆ.

— ಡಾ.ಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಿಎಸ್‌ಎಸ್‌ಐ ಕೇಂದ್ರ, ಮೈಸೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net