ಎಂಟನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಪ್ರತಿಭಟನೆ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಸ್ಥಳದಲ್ಲಿಯೇ ಆಹಾರ ತಯಾರಿಸುತ್ತಿರುವುದು.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಸ್ಥಳದಲ್ಲಿಯೇ ಆಹಾರ ತಯಾರಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಗುಂಡ್ಲುಪೇಟೆ: ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯ ವಿಳಂಬ, ಮಿತಿ ಮೀರಿದ ಟಿಪ್ಪರ್ ಹಾವಳಿ ನಿಯಂತ್ರಣ, ಗಣಿ ಸಂಪತ್ತು ಲೂಟಿ, ಸಫಾರಿ ಬಂದ್‌ಗೆ ಒತ್ತಾಯಿಸಿ ರೈತ ಸಂಘಟನೆ ಕೈಗೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸೋಮವಾರ 7 ದಿನ ಪೂರೈಸಿದೆ.
ಸಾಮೂಹಿಕ ನಾಯಕತ್ವದ ರಾಜ್ಯ ಸಮಿತಿಯ ಹೊನ್ನೂರು ಪ್ರಕಾಶ್ ನೇತೃತ್ವದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಚೇರಿ ಎದುರು ಆರಂಭಿಸಿದ ಪ್ರತಿಭಟನಾ ಸ್ಥಳಕ್ಕೆ ಮೊದಲನೇ ದಿನವೇ ಸಂಬಂಧಿಸಿದ ಅಧಿಕಾರಿಗಳು ಬಂದು ಸಮಸ್ಯೆಗಳಿಗೆ ಪರಿಹಾರ ಸೂಚಿಸದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಅನಿರ್ದಿಷ್ಟಾವಧಿಗೆ ಕೊಂಡೊಯ್ಯಲು ನಿರ್ಧರಿಸಿದರು. ಪ್ರತಿಭಟನೆ ಆರಂಭಿಸಿದ ಮೂರನೇ ದಿನಕ್ಕೆ ಸ್ಥಳಕ್ಕೆ ಶಾಸಕ ಗಣೇಶ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಅಹವಾಲು ಸ್ವೀಕರಿಸಿದರೂ ಸಮಸ್ಯೆಗಳಿಗೆ ಪರಿಹಾರ ಸೂಚಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿರ್ದಿಷ್ಟಾವಧಿಗೆ ಮುಂದುವರೆದಿದೆ.
ಮೇ 21ರಂದು ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಪ್ರತಿಭಟನೆ
ಮುಂದುವರಿಯಲಿದೆ. ಇದರಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಗ್ರಾಮದ 10 ರೈತರು ಸರದಿಯಂತೆ ಪಾಲ್ಗೊಳ್ಳುತ್ತಿದ್ದು, ಪ್ರತಿಭಟನೆಯ ಕಿಚ್ಚು ಆರದಂತೆ ನೋಡಿಕೊಳ್ಳುತ್ತಿದ್ದಾರೆ.
ತಾಲೂಕು ಕಚೇರಿ ಎದುರು ಹಾಕಿರುವ ಶಾಮಿಯಾನ ಬಳಿಯೇ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಸ್ಥಳದಲ್ಲಿಯೇ ಉಪಾಹಾರವಾಗಿ ಬಾತ್, ಉಪ್ಪಿಟ್ಟು, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಅನ್ನಸಾಂಬಾರ್ ತಯಾರಿಸಿ ಸೇವಿಸುತ್ತಿದ್ದಾರೆ. ಸೊಳ್ಳೆಗಳಿಂದ ಪಾರಾಗಲು ಸೊಳ್ಳೆಪರದೆ ಬಳಸುತ್ತಿದ್ದು, ಪ್ರತಿಭಟನಾಕಾರರು ಬೆಳಗ್ಗೆ 9 ಗಂಟೆ ಸುಮಾರಿಗೆ ಬೇರೆ ಊರುಗಳವರು ಬಂದ ನಂತರ ತಮ್ಮ ಕೆಲಸಕಾರ್ಯಗಳಿಗೆ ಹೋಗುತ್ತಿದ್ದಾರೆ.
ಜಿಲ್ಲೆಯ ಹಾಗೂ ತಾಲೂಕಿನ ಗಣಿ ಸಂಪತ್ತನ್ನು ಅಕ್ರಮವಾಗಿ ನೆರೆರಾಜ್ಯಗಳಿಗೆ ಭಾರಿ ಪ್ರಮಾಣದಲ್ಲಿ ಸಾಗಣೆ ಮಾಡುತ್ತಿರುವುದು ಗ್ರಾಮಾಂತರ ಪ್ರದೇಶಗಳು ಅತಿ ಭಾರದ ವಾಹನಗಳ ಸಂಚಾರದಿಂದ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net