ಹನೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.15ರಂದು ಇಲ್ಲಿನ ತಹಸೀಲ್ದಾರ್ ಕಚೇರಿ ಮುಂಭಾಗ ಅನಿರ್ದಿಷ್ಟವಾಧಿ ಚಳವಳಿ ಹಮ್ಮಿಕೊಳ್ಳಲಾಗುತ್ತಿದ್ದು, ಸಮಸ್ಯೆ ಬಗೆಹರಿಯದಿದ್ದಲ್ಲಿ ಏ.21 ರಂದು ಗುಂಡ್ಲುಪೇಟೆಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ತಾಲೂಕಿನಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿವ ನೀರು ಹಾಗೂ ಕೃಷಿಗೆ ಸಮಸ್ಯೆಯಾಗಿದೆ. ಈಗಾಗಲೇ ನಿರ್ಧರಿಸಿರುವ ಗುಂಡಾಲ್ ಜಲಾಶಯದಿಂದ ಹುಬ್ಬೆಹುಣಸೆ ಕೆರೆ ಹಾಗೂ ತಾಲೂಕಿನ ಎಲ್ಲ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಕುಗ್ರಾಮಗಳಿಗೆ ಕುಡಿವ ನೀರು ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕು. ತಾಲೂಕಿನ ಜಾನುವಾರುಗಳಿಗೆ ಕುಡಿವ ನೀರು ಹಾಗೂ ಮೇವು ಒದಗಿಸಬೇಕು. ಜಾನುವಾರುಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ತಗುಲದಂತೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಫಾರಿಯಿಂದಾಗಿ ಕಾಡು ಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲನ್ನು ಹಾಳು ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಸಫಾರಿಯನ್ನು ಸ್ಥಗಿತಗೊಳಿಸಬೇಕು. ಕಳೆದ 8 ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಚಂಗಡಿ ಗ್ರಾಮಕ್ಕೆ ಪುನರ್ವಸತಿ ಕಲ್ಪಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ಸಮಸ್ಯೆ ಬಗೆಹರಿಸಬೇಕು. ಈ ದಿಸೆಯಲ್ಲಿ ಅನಿರ್ದಿಷ್ಟವಾಧಿ ಚಳವಳಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ತಾಲೂಕು ಅಧ್ಯಕ್ಷ ಮಾದಪ್ಪ, ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಶಾಂತಕುಮಾರ್, ನಾರಾಯಣ, ಪ್ರಕಾಶ್, ಅಮೋಘ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.