ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವುದು ಜ್ಞಾನ ಮಾರ್ಗ. ಆದರೆ ಆಡಳಿತ ವ್ಯವಸ್ಥೆಯ ಅಜ್ಞಾನದ ಮಾರ್ಗ ಚಾಮರಾಜನಗರದ ಸಾರ್ವಜನಿಕರನ್ನು ಇಷ್ಟು ವರ್ಷಗಳಿಂದ ಬೆಳಕಿನಿಂದ ಕತ್ತಲ ಕಡೆಗೆ ನಡೆಯುವಂತೆ ಮಾಡಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿರುವ ಪ್ರಮುಖ ರಸ್ತೆಯಲ್ಲೇ ಬೀದಿದೀಪಗಳಿಲ್ಲ. ಸದಾಕಾಲ ಜನಸಂದಣಿ, ವಾಹನ ಸಂಚಾರ, ಶಾಲೆ ಮತ್ತು ಕಾಲೇಜು ಇರುವ ಸುಲ್ತಾನ್ ಶರೀಷ್ ರಸ್ತೆ, ನೆರೆಯ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲಿನಿಂದ ಕೂಡಿದೆ. ಈ ರಸ್ತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲು ಇಷ್ಟು ವರ್ಷಗಳೇ ಬೇಕಾಗಿದೆ ಎಂದರೆ, ಇನ್ನು ಜನಸಂದಣಿ ಕಡಿಮೆ ಇರುವ ರಸ್ತೆಗಳು ಬೆಳಕು ಕಾಣುವುದು ದೂರದ ಮಾತು. ಸಂಜೆಯಾದರೆ ಕತ್ತಲ ರಸ್ತೆಯಲ್ಲಿ ವ್ಯಾಪಾರ ವಹಿವಾಟಿಗೂ ತೊಂದರೆಯಾಗುತ್ತಿದೆ. ರಸ್ತೆ ಬದಿಯ ಪಾದಾಚಾರಿಗಳು ುಟ್‌ಪಾತ್ ಮೇಲೆ ನಡೆಯಲು ಅಂಗಡಿಗಳ ಕರೆಂಟ್ ಬೆಳಕನ್ನೇ ಅವಲಂಬಿಸಬೇಕಾಗಿದೆ. ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶ ಮಾರ್ಗದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ. ಹೀಗಾಗಿ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್‌ಪೋಸ್ಟ್ ಬಳಿಯೇ ವಾಹನಗಳು ನಿಲ್ಲಬೇಕು. ಬಹುಪಾಲು ಸರಕು ವಾಹನಗಳು ಬೆಳಗ್ಗೆ ವೇಳೆಯಲ್ಲಿ ಸಂಚಾರ ಮಾಡುತ್ತಿದ್ದು, ರಾತ್ರಿ ವೇಳೆ ವಾಹನಗಳ ಓಡಾಟ ಮೊದಲಿಗಿಂತ ವಿರಳವಾಗಿವೆ. ಬೀದಿದೀಪವಿಲ್ಲದ ರಸ್ತೆ, ವಾಹನಗಳ ಓಡಾಟ ಕಡಿಮೆ ಇರುವ ಮಾರ್ಗದ ಕತ್ತಲಿನಲ್ಲಿ ಹಳ್ಳಿಗಾಡಿನ ಬೈಕ್ ಸವಾರರು ಓಡಾಡುತ್ತಿದ್ದಾರೆ. ಸದ್ಯ ಬೀದಿದೀಪಗಳ ಅಳವಡಿಕೆಯ ಕಾಮಗಾರಿ ನಡೆಯುತ್ತಿರುವುದು ವಾಹನ ಸವಾರರಲ್ಲಿ ಸಮಾಧಾನ ತಂದಿದೆ.