ಕೂಲಿಗೋದ್ರೆ ನೀರಿಲ್ಲ, ನೀರಿಗೆ ನಿಂತ್ರೆ ಕೂಲಿ ಇಲ್ಲ..!

ಹನೂರು ತಾಲೂಕಿನ ಎಂ.ಜಿ.ದೊಡ್ಡಿ ಗ್ರಾಮದಲ್ಲಿ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಿರುವ ನೀರನ್ನು ಹಿಡಿಯುತ್ತಿರುವ ಮಹಿಳೆಯರು
ಹನೂರು ತಾಲೂಕಿನ ಎಂ.ಜಿ.ದೊಡ್ಡಿ ಗ್ರಾಮದಲ್ಲಿ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಿರುವ ನೀರನ್ನು ಹಿಡಿಯುತ್ತಿರುವ ಮಹಿಳೆಯರು
Published on

ಪ್ರಮುಖ ಮುಖ್ಯಾಂಶಗಳು

  • ಎಂ.ಜಿ.ದೊಡ್ಡಿಯಲ್ಲಿ ಜಲದ ಅಭಾವ
  • ದುಡಿಮೆಯ ವೇಳೆಯಲ್ಲಿ ಗ್ರಾಪಂ ಟ್ಯಾಂಕರ್ ನೀರು ಪೂರೈಕೆ
ಚಾಮರಾಜನಗರ: ಮಾನವನ ದೇಹಕ್ಕೆ ನೀರು ಅತ್ಯಗತ್ಯ. ಬದುಕು ನಡೆಸಲು ಕೂಲಿಯೂ ಅನಿವಾರ್ಯ. ಇವೆರಡೂ ಅವಶ್ಯಕತೆಗಳ ಸಂದಿಗ್ಧತೆಯ ನಡುವೆ ಜಿಲ್ಲೆಯಲ್ಲಿ ಜಲದ ಹಾಹಾಕಾರವಿರುವ ಗ್ರಾಮವೊಂದರ ಬಡ ಮಹಿಳೆಯರು ಸಿಲುಕೊಂಡಿದ್ದಾರೆ. ಕೂಲಿಗೆ ಹೋದರೆ ಮನೆಗಳಿಗೆ ಕುಡಿಯಲು ನೀರು ಸಿಗುವುದಿಲ್ಲ, ನೀರು ಹಿಡಿಯಲು ನಿಂತರೆ ಕೂಲಿ ಕೆಲಸಕ್ಕೆ ಹೋಗಲು ಆಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇದು ಹನೂರು ತಾಲೂಕಿನ ಕೌದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ.ದೊಡ್ಡಿ ಗ್ರಾಮದ ಬಿಕ್ಕಟ್ಟು. ಬೇಸಿಗೆಯ ತಾಪಕ್ಕೆ ಗ್ರಾಮದಲ್ಲಿರುವ 4 ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಗ್ರಾಮ ಪಂಚಾಯಿತಿಯಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆಯಾ ದಿನದ ವಿದ್ಯುತ್ ಸೌಲಭ್ಯದ ಸಮಯವನ್ನು ಆಧರಿಸಿ ಕೌದಳ್ಳಿಯ ಖಾಸಗಿ ಬೋರ್‌ವೆಲ್‌ನಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿದೆ. ಟ್ಯಾಂಕರ್ ಬರುವುದನ್ನೇ ಕಾದು ಕೂರುವ ಬಡ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕೂಲಿಗೆ ಹೋದರೆ ನೀರು ಸಿಗುವುದಿಲ್ಲ.
ದಿನಗೂಲಿ ಮೇಲೆ ನಿಂತಿರುವ ಬದುಕು:
ಹನೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಗುವ ಎಂ.ಜಿ.ದೊಡ್ಡಿ ಆರ್ಥಿಕವಾಗಿ ಹಿಂದುಳಿದಿದೆ. ಅಭಿವೃದ್ಧಿಯಲ್ಲೂ ಕಡೆಗಣಿಸಲ್ಪಟ್ಟಿದೆ. ಗ್ರಾಮಕ್ಕೆ ಉತ್ತಮವಾದ ರಸ್ತೆ ಇಲ್ಲ, ಬೀದಿಯಲ್ಲಿ ವಿದ್ಯುತ್ ದೀಪಗಳಿಲ್ಲ. ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿಲ್ಲ. ವರುಣನ ಕೃಪೆ ತುಂಬಾ ಕಡಿಮೆ. ಜನರಿಗೆ ಜಮೀನುಗಳಿದ್ದರೂ ನೀರಾವರಿ ಸೌಲಭ್ಯವಿಲ್ಲದೆ ಕೃಷಿ ಮಾಡುವುದು ಸವಾಲಾಗಿದೆ. ಭೂಮಿ ಇಲ್ಲದವರು ಬೇರೆ ಊರುಗಳ ಜಮೀನುಗಳಲ್ಲಿ ಕೂಲಿಗೆ ಹೋಗುತ್ತಾರೆ. ಪುರುಷರಷ್ಟೇ ಪ್ರಮಾಣದಲ್ಲಿ ಮಹಿಳೆಯರೂ ದುಡಿಮೆ ಮಾಡುತ್ತಿದ್ದಾರೆ. ದಿನದ ಕೂಲಿಯ ಮೇಲೆ ಇವರ ಬದುಕು ನಿಂತಿದೆ. ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಹೊಟ್ಟೆಪಾಡಿನ ಮೇಲೂ ಪರಿಣಾಮ ಬೀರಿದೆ.
ನೀರು ಕುಡಿದೇ ಬದುಕಬೇಕಾ..?
ಗ್ರಾಮದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೊಸದಾಗಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗೋದು ಅನುಮಾನ. ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಎಂ.ಜಿ.ದೊಡ್ಡಿಯೂ ಒಂದು. ಈ ಗ್ರಾಮಕ್ಕೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡಬೇಕಾದ ಪರಿಸ್ಥಿತಿ ಇದೆ. ಮೇ 16ರಂದು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಟಕೇಶ್ ಅವರೇ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಜನರ ಬಳಿ ನೀರಿನ ಸಮಸ್ಯೆ ಕುರಿತು ಅಹವಾಲು ಆಲಿಸಿದ್ದರು. ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ತಿಳಿಸಿದ್ದರು. ಸಚಿವ ಸೂಚನೆಯಂತೆ ಗ್ರಾಮಕ್ಕೆ ನೀರು ಸರಬರಾಜು ಆಗುತ್ತಿದೆ. ಆದರೆ ವಿದ್ಯುತ್ ಅಭಾವದ ಕಾರಣಕ್ಕೆ ಕೌದಳ್ಳಿಯಲ್ಲಿ ಟ್ಯಾಂಕರ್‌ಗೆ ನೀರು ತುಂಬಿಸಿ ಗ್ರಾಮಕ್ಕೆ ತರುವ ಸಮಯ ಗ್ರಾಮಸ್ಥರಿಗೆ ಹೊಂದಾಣಿಕೆಯಾಗುತ್ತಿಲ್ಲ. ಮುಂಜಾನೆ ಅಥವಾ ಸಂಜೆ ವೇಳೆ ಟ್ಯಾಂಕರ್ ಬಂದರೆ ಕೂಲಿಗೆ ಹೋಗುವ ಮಹಿಳೆಯರಿಗೆ ಅನುಕೂಲವಾಗುತ್ತದೆ. ಮಧ್ಯಾಹ್ನದ ವೇಳೆ ಟ್ಯಾಂಕರ್ ಬಂದರೆ ಮಹಿಳೆಯರು ಕೂಲಿಗೆ ಹೋಗಲು ಆಗುವುದಿಲ್ಲ. ಸದ್ಯಕ್ಕೆ ಶಾಲೆ ರಜೆ ಇರುವ ಮಕ್ಕಳು ತಮಗೆ ಆದಷ್ಟು ನೀರನ್ನು ಮನೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ನೀರು ಹಿಡಿದಿಡಲು ಯಾರೂ ಇಲ್ಲದ ಕಾರಣ ಕೂಲಿಗೆ ಹೋಗದೆ ಮನೆಯಲ್ಲೇ ಉಳಿದುಕೊಳ್ಳಬೇಕಾಗುತ್ತಿದೆ. ಟ್ಯಾಂಕರ್‌ನಲ್ಲಿ ನೀರು ಕೊಡುವ ಸಮಯವನ್ನು ಗ್ರಾಮದ ಮಹಿಳೆಯರು ಹೇಳಿದ ಸಮಯಕ್ಕೆ ಬದಲಾಯಿಸದೆ ಇದ್ದರೆ ಕೂಲಿ ಇಲ್ಲದ ಜನರು ನೀರು ಕುಡಿದೇ ಬದುಕಬೇಕಾ ಎನ್ನುವ ಪ್ರಶ್ನೆ ಹುಟ್ಟುತ್ತದೆ.
ಸುಳ್ವಾಡಿ ಸಂತ್ರಸ್ತರ ಕಣ್ಣೀರು:
ನೀರಿನ ಕೊರತೆ ಎದುರಿಸುತ್ತಿರುವ ಎಂ.ಜಿ.ದೊಡ್ಡಿಯಲ್ಲಿ ಕಣ್ಣೀರಿಗೆ ಕೊನೆಯೇ ಇಲ್ಲದಂತಾಗಿದೆ. 2018ರ ಡಿ.14ರಂದು ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದಲ್ಲಿ ಮೃತಪಟ್ಟ ಇಬ್ಬರು, ಬದುಕುಳಿದ 24 ಜನರು ಇದೇ ಗ್ರಾಮದವರು. ಇವರ ಸಂಕಷ್ಟಗಳು ಕಣ್ಣೀರ ಕೋಡಿಯನ್ನೇ ಹರಿಸುತ್ತಿವೆ. ಆರೋಗ್ಯ ಸಮಸ್ಯೆ, ದುಡಿಮೆ ಮಾಡಲು ಆಗದಷ್ಟು ನಿಶಕ್ತಿ ಕಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಪಾರ್ವತಿ ಮತ್ತು ವೀರಮ್ಮ ವಿಜಯವಾಣಿಯೊಂದಿಗೆ ಮಾತನಾಡಿ, ನಾವು ಬದುಕುಳಿದ ದಿನವೂ ಸಾಯುವಂತಾಗಿದೆ. ಊರಿಗೆ ನೀರು ಕೊಡಿ ಎಂದು ಕೇಳುವುದರ ಜತೆಗೆ, ನಮಗೆ ವಸತಿ ಸೌಲಭ್ಯ ನೀಡುವುದಾಗಿ ಸರ್ಕಾರ ನೀಡಿದ ಭರವಸೆ ಈಡೇರಿಲ್ಲ. ತಿಂಗಳಿಗೆ ನೀಡುತ್ತಿದ್ದ ಆಹಾರವನ್ನು ಹಲವು ತಿಂಗಳಿನಿಂದ ನಿಲ್ಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಶ್ವತವಾಗಿ ನೀರಿನ ಸೌಲಭ್ಯ ನೀಡಿ:
ಎಂ.ಜಿ.ದೊಡ್ಡಿ ಯಾವಾಗಲೂ ಬರಗಾಲ ಅನುಭವಿಸುತ್ತಿದೆ. ಬೋರ್‌ವೆಲ್ ಹಾಕಿಸಿದರೆ ಎರಡ್ಮೂರು ತಿಂಗಳಲ್ಲಿ ಬತ್ತಿ ಹೋಗುತ್ತದೆ. ಈಗ ಟ್ಯಾಂಕರ್ ಮೂಲಕ ನೀಡುತ್ತಿರುವ ನೀರನ್ನು ನಂಬಿಕೊಂಡು ಇರಲು ಆಗಲ್ಲ. ಕೂಲಿಗೆ ತೊಂದರೆಯಾಗುತ್ತಿದೆ. ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕೆಂದು ಗ್ರಾಮಸ್ಥೆ ಉತ್ತರಮ್ಮ ಒತ್ತಾಯಿಸಿದ್ದಾರೆ.
ನಮ್ಮೂರು ಎಂ.ಜಿ.ದೊಡ್ಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ಟ್ಯಾಂಕರ್‌ನಲ್ಲಿ ತಂದು ಕೊಡುತ್ತಿರುವ ನೀರು ಎಲ್ಲರಿಗೂ ಸಾಕಾಗುವುದಿಲ್ಲ. ಕೆಲವೊಮ್ಮೆ ನೀರಿಗಾಗಿ ಜಗಳ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕನಿಷ್ಕಾ, 7ನೇ ತರಗತಿ ವಿದ್ಯಾರ್ಥಿನಿ, ಸರ್ಕಾರಿ ಶಾಲೆ, ಕೌದಳ್ಳಿ
ಪ್ರತಿದಿನ ಬೆಳಗ್ಗೆ 8 ಗಂಟೆಗೆ ತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋದರೆ ಸಂಜೆ 4 ಗಂಟೆಗೆ ವಾಪಸ್ ಮನೆಗೆ ಬರುತ್ತೇವೆ. ಮಧ್ಯಾಹ್ನದ ವೇಳೆಯಲ್ಲಿ ಟ್ಯಾಂಕರ್ ಬಂದರೆ ಕೂಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ದಿನದ ಕೂಲಿ ಬಿಟ್ಟು ನೀರು ಹಿಡಿಯುತ್ತ ನಿಲ್ಲಬೇಕು. ಕೆಲಸಕ್ಕೆ ಹೋದರೆ ನೀರು ಇರಲ್ಲ.
ರಾಧಾ, ಗ್ರಾಮಸ್ಥೆ, ಎಂ.ಜಿ.ದೊಡ್ಡಿ
ಎಂ.ಜಿ.ದೊಡ್ಡಿಯಲ್ಲಿ ಬೋರ್‌ವೆಲ್‌ಗಳು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದೇವೆ. ವಿದ್ಯುತ್ ಸಮಸ್ಯೆಯಿಂದಾಗಿ ಬೋರ್‌ವೆಲ್‌ನಿಂದ ಟ್ಯಾಂಕರ್‌ಗೆ ನೀರು ತುಂಬಿಸಿಕೊಂಡು ಬರಲು ಸಮಯ ಹಿಡಿಯುತ್ತಿದೆ. ಸೋಮವಾರದಿಂದಲೇ ಗ್ರಾಮಕ್ಕೆ ಮುಂಜಾನೆ ವೇಳೆಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುವುದು.
ಆಕಾಶ್, ಪಿಡಿಒ, ಕೌದಳ್ಳಿ ಗ್ರಾಮ ಪಂಚಾಯಿತಿ, ಹನೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net