ಮೊದಲ ದಿನ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು, ಬೆಳೆನಾಶ, ಕುಡಿಯುವ ನೀರಿನ ಕೊರತೆ ಬಗ್ಗೆ ಪರಿಶೀಲಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೆಳೆನಾಶದ ವಿವರ ಪಡೆದುಕೊಳ್ಳಲಾಗಿದೆ. ಎಲ್ಲ ಕಡೆಗಳಲ್ಲಿ ಸೂರ್ಯಕಾಂತಿ, ಜೋಳ, ಹೆಸರು, ಉದ್ದು, ಮುಂತಾದ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸಿದ್ದರೂ ಇನ್ನೂ ಹಲವರು ಮಾಹಿತಿಯ ಕೊರತೆಯಿಂದ ವಿಮೆ ಮಾಡಲು ಸಾಧ್ಯವಾಗದ ಕಾರಣ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು ಇನ್ನೊಂದು ತಿಂಗಳಲ್ಲಿ ಮಳೆಬೀಳದಿದ್ದರೆ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಲಿದೆ. ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸ ಪೂರ್ಣಗೊಂಡ ಬಳಿಕ ಕೆಡಿಪಿ ಸಭೆ ಕರೆದು ಗೋಶಾಲೆ ತೆರೆಯುವ ಇಲ್ಲವೇ ಜಾನುವಾರುಗಳಿಗೆ ಮೇವು ಪೂರೈಸಬೇಕೇ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.