ತಾಲೂಕಿನ ತೊಮಿಯಾರ್ ಪಾಳ್ಯದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣ ಹಿನ್ನೆಲೆಯಲ್ಲಿ ಶನಿವಾರ ಮೃತರ ಕುಟುಂಬಸ್ಥರು ರೈತಪರ ಸಂಘಟನೆಗಳ ಆಕ್ರೋಶ ಸ್ಫೋಟಗೊಂಡಿದ್ದು, ಹನೂರಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿತು.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಗೇಟ್ ಮುಂಭಾಗದಲ್ಲಿ ಜಮಾಯಿಸಿದ ಮೃತರ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಹಾಗೂ ನೂರಾರು ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.
ಮೃತಪಟ್ಟಿರುವ ಮೂವರಿಂದ ತಪ್ಪಾಗಿದ್ದರೆ ಅವರನ್ನು ಬಂಧಿಸಿ ಕಾನೂನಿನಡಿ ಶಿಕ್ಷೆ ಕೊಡಿಸಬೇಕಿತ್ತು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಮೂವರನ್ನು ಗುಂಡಿಕ್ಕಿ ಕೊಂದಿರುವುದು ಎಷ್ಟು ಸರಿ? ಇದರಿಂದ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಮೃತರ ಕುಟುಂಬಸ್ಥರು ಕಣ್ಣೀರು ಹಾಕಿದರು.
ಗುಂಡಿಕ್ಕಿ ಕೊಂದವರನ್ನು ನಮ್ಮ ಮುಂದೆ ಕರೆ ತರಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಪರಿಹಾರ, ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಗುಂಡಿಕ್ಕಿ ಕೊಂದಿರುವುದು ಅಕ್ಷಮ್ಯ ಅಪರಾಧ. ರೈತರ ಜೀವದ ಜತೆ ಚೆಲ್ಲಾಟವಾಡಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಕುಟುಂಬಸ್ಥರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಅರಣ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.
ಬಿಜೆಪಿ ಹನೂರು ಮಂಡಲಾಧ್ಯಕ್ಷ ಕಣ್ಣೂರು ಕೆ.ಪಿ.ವೃಷಭೇಂದ್ರಸ್ವಾಮಿ ಮಾತನಾಡಿ, ಸ್ವಾತಂತ್ರ ದಿನಾಚರಣೆ ದಿನದಂದೇ ಗುಂಡಿಕ್ಕಿ ಕೊಂದಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಅತಿರೇಕ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ. ಇದರಿಂದ ಮೃತರ ಕುಟುಂಬಗಳು ಬೀದಿಗೆ ಬಂದಂತಾಗಿದೆ. ಆದ್ದರಿಂದ ಅರಣ್ಯ ಸಚಿವರು, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.
ಸಂಜೆಯವರೆಗೂ ಪ್ರತಿಭಟನಕಾರರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ರೊಚ್ಚಿಗೆದ್ದವರನ್ನು ಸಮಾಧಾನಪಡಿಸಲು ಪೊಲೀಸರು ಹರಸಹಾಸ ಪಟ್ಟರು. ಸಂಜೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಮೃತದೇಹ ಸಿಗದ ಇರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಪ್ರತಿಭಟನಕಾರರು ಹನೂರು ಠಾಣೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುವುದರನ್ನು ಮುಂದುವರಿಸಿದ್ದರು.
ಸ್ಪಷ್ಟನೆ ಕೊಟ್ಟ ಅರಣ್ಯ ಇಲಾಖೆ
ಶೂಟೌಟ್ ಪ್ರಕರಣದ ಕುರಿತು ಶನಿವಾರ ಸಂಜೆ ಪ್ರಕಟಣೆ ಹೊರಡಿಸಿದ ಅರಣ್ಯ ಇಲಾಖೆ, ಬೇಟೆಗಾರರಿಗೆ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಲಾಗಿತ್ತು. ಆದರೂ ದಾಳಿ ಮಾಡಲು ಮುಂದಾಗಿದ್ದು, ಕೈಮೀರಿದ ಸನ್ನಿವೇಶದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿ ಅರಣ್ಯ ಸಂಪತ್ತು, ವನ್ಯಜೀವಿಗಳ ಸಂರಕ್ಷಣೆ, ಆತ್ಮರಕ್ಷಣೆ ಸದುದ್ದೇಶದಿಂದ ಮಾತ್ರವೇ ಶೂಟೌಟ್ ಮಾಡಿದೆ ಎಂದು ತಿಳಿಸಿದೆ.