ಮೇ 16ರಂದು ಚಾಮರಾಜನಗರದ ಎಪಿಜೆ ಅಬ್ದುಲ್ ಕಲಾಂ ನಗರಕ್ಕೆ ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿದ್ದಾಗ ಬಡಾವಣೆಯ ನಿವಾಸಿಗಳು ನಿವೇಶನದ ಸೌಲಭ್ಯ ನೀಡಿ ಎಂದು ಮನವಿ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಬಡಜನರಿಗೆ ನಿವೇಶನ ಹಂಚಿಕೆ ಮಾಡದೆ ಇರುವುದು ಸ್ವಂತ ವಸತಿ ಹೊಂದುವುದಕ್ಕೆ ಸಾಧ್ಯವಾಗುತ್ತಿಲ್ಲ. ಮನೆ ನಿರ್ಮಾಣದ ಕನಸ ಕಂಡು ಆರ್ಥಿಕ ಸಹಾಯಧನ ಪಡೆಯಲು ಬಯಸುವವರಿಗೂ ನೂರೆಂಟು ತೊಡಕುಗಳು ಎದುರಾಗುತ್ತಿವೆ. ವಸತಿ ರಹಿತರು ಸ್ವಂತ ಸೂರಿಲ್ಲದವರ ಲೆಕ್ಕಕ್ಕೆ ಮಾತ್ರ ಸೇರಿಕೊಂಡಿಲ್ಲ. ಇದರ ಹಿಂದೆ ಬಡತನ, ನಿರುದ್ಯೋಗ, ಆರೋಗ್ಯ ಸಮಸ್ಯೆ, ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸಿರುವ ಸಮಸ್ಯೆಗಳಗೂ ಇವೆ. ವಸತಿ ಸೌಲಭ್ಯ ಒದಗಿಸಿಕೊಡುವುದರಿಂದ ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯೋಗ ದೊಡ್ಡದಾಗಿ ಬೆಳೆದು ನಿಂತಿದೆ. ನಿವೇಶನ ಖರೀದಿ ಮಾಡಲು ಮಧ್ಯಮ ವರ್ಗಗಳು ಸಾಲದ ಮೊರೆ ಹೋಗುವಂತೆ ಭೂಮಿ ದರ ಹೆಚ್ಚಾಗಿದೆ. ಇನ್ನು ಬಡವರಂತೂ ನಿವೇಶನ ಖರೀದಿ ಮಾಡುವುದನ್ನು ಯೋಜನೆಯೇ ಮಾಡುವಂತಿಲ್ಲ. ಹೀಗಿರುವಾಗ ಸರ್ಕಾರದ ವಸತಿ ಯೋಜನೆಗಳು ಜನರನ್ನು ಪರಿಣಾಕಾರಿಯಾಗಿ ತಲುಪಬೇಕಿದ್ದು, ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.