ಗಣೇಶ ವಿಸರ್ಜನೆಗೆ ತಾತ್ಕಾಲಿಕ ಹೊಂಡ ಬಳಸಿ

ಯಳಂದೂರು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಕೃತಕ ಹೊಂಡದಲ್ಲಿ ಬುಧವಾರ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು  ಗಣೇಶ ಮೂರ್ತಿಯನ್ನು ವಿಸರ್ಜಿಸುತ್ತಿರುವುದು.
ಯಳಂದೂರು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಕೃತಕ ಹೊಂಡದಲ್ಲಿ ಬುಧವಾರ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗಣೇಶ ಮೂರ್ತಿಯನ್ನು ವಿಸರ್ಜಿಸುತ್ತಿರುವುದು.
Published on
ಯಳಂದೂರು: ಯಳಂದೂರು ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪಟ್ಟಣ ಪಂಚಾಯಿತಿಯೇ ನಿರ್ಮಿಸಿರುವ ತಾತ್ಕಾಲಿಕ ಹೊಂಡವನ್ನೇ
ಬಳಸಿಕೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಮನವಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಕಚೇರಿ ಸಮೀಪ ನಿರ್ಮಿಸಿರುವ ಹೊಂಡದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಮಾತನಾಡಿದ ಅವರು, ನಮ್ಮ ಊರಿನ ಕೆರೆಗಳನ್ನು ಭವಿಷ್ಯತ್ತಿಗೆ ಉಳಿಸಬೇಕು ಎಂದರು.
ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡುವಲ್ಲಿ ಷರತ್ತುಗಳನ್ನು ವಿಧಿಸಲಾಗಿದೆ. ಕಾಲುವೆ, ಕೆರೆ, ನದಿಗಳಲ್ಲಿ ಗಣೇಶನನ್ನು ವಿಸರ್ಜಿಸಬಾರದು
ಎಂದು ಸೂಚಿಸಲಾಗಿದೆ. ಜಲ ಮಾಲಿನ್ಯ ತಡೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಬಣ್ಣ, ಸೀಸ ಮತ್ತು ತ್ಯಾಜ್ಯ ಮಾಲಿನ್ಯ
ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ 5 ಅಡಿ ಆಳದ ಹೊಂಡವನ್ನು ನಿರ್ಮಿಸಿ ಇದಕ್ಕೆ ಶುದ್ಧ ನೀರನ್ನು ತುಂಬಿಸಲಾಗಿದೆ. ಇದರ ಅಡಿಯಲ್ಲಿ ಎಂ. ಸ್ಯಾಂಡ್ ಹಾಕಲಾಗಿದೆ. ಪಾಲಿಥಿನ್ ಟಾರ್ಪಲ್ ಬಳಸಿ ಹೊಂಡ ನಿರ್ಮಾಣವಾಗಿದೆ. ಸುರಕ್ಷತೆಗಾಗಿ ಇದರ ಸುತ್ತಲೂ ಮರದ ಬೇಲಿಯನ್ನು ಹಾಕಲಾಗಿದೆ. ಇಲ್ಲಿ ಮೂರ್ತಿಗಳನ್ನು ವಿಸರ್ಜಿಸಲು ಮೆಟ್ಟಿಲುಗಳ ವ್ಯವಸ್ಥೆಯೂ ಇದೆ. ವಿಸರ್ಜನಾ ಕಾರ್ಯಗಳು ಮುಗಿದ ಮೇಲೆ ಈ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗಿಡ ಮರಗಳಿಗೆ ಬಳಸಿಕೊಳ್ಳಲಾಗುವುದು. ಹಾಗಾಗಿ ಪ್ರತಿಯೊಬ್ಬರೂ ಈ ಕೃತಕ ಹೊಂಡದ ಸೌಲಭ್ಯವನ್ನು ಪಡೆದುಕೊಂಡು ಗಣೇಶ ಮೂರ್ತಿಯನ್ನು ಇಲ್ಲೇ ವಿಸರ್ಜಿಸಬೇಕು ಎಂದರು.
ಈ ವೇಳೆಯಲ್ಲಿ ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಸಬೇಕು. ಕೇವಲ ಮಣ್ಣಿನ ಮೂರ್ತಿಯನ್ನು ಮಾತ್ರ ನೀರಿಗೆ ಹಾಕಬೇಕು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ನೀರಿನ ಬಳಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಮೆಟ್ಟಿಲುಗಳ ಮೇಲೆ ನಿಂತು ಜಾಗರೂಕರಾಗಿ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಆರೋಗ್ಯಾಧಿಕಾರಿ ರಾಘವೇಂದ್ರ, ಮಲ್ಲಿಕಾರ್ಜುನ , ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹೇಮಂತ್ ಕುಮಾರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net