ಹನೂರಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಬಿಇಒ ಪ್ರತಿಭಾ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ರವೀಂದ್ರ, ಚಿನ್ನಪ್ಪಯ್ಯ, ಮಹೇಶ್ ಇದ್ದರು.
ಹನೂರು : ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶೈಕ್ಷಣಿಕ ವಲಯದಲ್ಲಿ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಯನ್ನು ಹತ್ತಿರದ ಶಾಲೆಗೆ ಸಂಯೋಜನೆ ಮಾಡಲು ರೂಪುರೇಷೆ ಸಿದ್ಧ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ಬಿಆರ್‌ಸಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಆದರೆ, ಹನೂರು ಶೈಕ್ಷಣಿಕ ವಲಯದಲ್ಲಿ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ತೊಡಕಾಗಿದೆ. ಹಾಗಾಗಿ ಇಲ್ಲಿನ ಮಕ್ಕಳಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸಿ ಸಮೀಪದ ಶಾಲೆಗಳಿಗೆ ಸೇರಿಸಿದರೆ ಅವರಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ.
ಮಕ್ಕಳೂ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗಿಯಾದರೆ ಅವರ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದರು. ಶಿಕ್ಷಣ ಇಲಾಖೆಯು ಕ್ಷೇತ್ರದಲ್ಲಿ ಸಮರ್ಪಕ ನಿರ್ವಹಣೆಯನ್ನು ಕಾಯ್ದುಕೊಳ್ಳಬೇಕು. ಆದ್ದರಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳು ಕಡಿಮೆಯಿರುವ ಶಾಲೆಗಳಲ್ಲಿ ಪಾಲಕರ ಸಭೆ ಕರೆದು ವಾಸ್ತವ ಸ್ಥಿತಿಯನ್ನು ತಿಳಿಸಿ ಮನವೊಲಿಸುವ ಕೆಲಸ ಮಾಡಬೇಕು. ಈ ಸಂಬಂಧ ಶಾಲೆಗಳ ಪಟ್ಟಿ ತಯಾರಿಸಿ ಅಗತ್ಯ ರೂಪುರೇಷೆ ಸಿದ್ಧ ಪಡಿಸಬೇಕು. ತಾಲೂಕಿಗೆ ಭೇಟಿ ನೀಡಿ ಸಭೆ ನಡೆಸಲಿರುವ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಂದ ಈ ಬಗ್ಗೆ ಅನುಮತಿ ಪಡೆಯಲಾಗುವುದು. ಸಭೆಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.
ಇದೇ ವೇಳೆ ಅಪರ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರ ಬಯಸುವ ವಿಷಯಗಳಾಧ ಶಿಕ್ಷಕರ ಕೊರತೆ, ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು, ಕಾಡಂಚಿನ ಶಾಲೆಗಳ ಅಭಿವೃದ್ಧಿಗೆ ವಿಶೇಷ ಗಮನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಬಿಇಒ ಪ್ರತಿಭಾ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ರವೀಂದ್ರ, ಚಿನ್ನಪ್ಪಯ್ಯ, ಮಹೇಶ್ ಹಾಗೂ ಸಿಆರ್‌ಪಿಗಳು ಇದ್ದರು.