ಸುಮಾರು ಐದು ಶತಮಾನಗಳ ಇತಿಹಾಸವನ್ನು ಹೊಂದಿರುವ ವಿರಕ್ತ ಪರಂಪರೆಗೆ ಸೇರಿದ ಶ್ರೀಮೂಡಗೂರು ಉದ್ದಾನೇಶ್ವರ ಮಠದ ಮೂಲ ಕರ್ತೃಗಳಾದ ಶ್ರೀ ಉದ್ದಾನ ಶಿವಯೋಗಿಗಳು 12ನೇ ಶತಮಾನದ ಬಸವಾದಿ ಶಿವಶರಣರ ಚಿಂತನೆಗಳನ್ನು ಪ್ರಸಾರ ಮಾಡುತ್ತಾ ಕನ್ನಡ ನಾಡಿನ ದಕ್ಷಿಣಕ್ಕೆ ಬಂದು ಈಗಿನ ಮೂಡುಗೂರು ಗ್ರಾಮದಲ್ಲಿ ಅಲ್ಲಿನ ಜನರ ಅಪೇಕ್ಷೆಯಂತೆ ನೆಲೆನಿಂತರು. ಇಂತಹ ಮಠದ ಹಿರಿಯ ಶ್ರೀಗಳು ಹಾಗೂ ಶ್ರೀಮಠದ ಭಕ್ತರ ಅಪೇಕ್ಷೆಯಂತೆ ಚಿನ್ಮಯಜ್ಞಾನಿ ಚನ್ನಬಸವಣ್ಣ ದಾಸೋಹ ಭವನ ನಿರ್ಮಾಣಗೊಂಡಿದೆ. ಈ ಭವನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುವಾಗುವಂತೆ ಸಕಲ ಸೌಲಭ್ಯಗಳನ್ನು ಒಳಗೊಂಡಿದೆ. ಭವನದ ಲೋಕಾರ್ಪಣೆ ಆ.27 ನೆರವೇರಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಸಿದ್ದಲಿಂಗ ಸ್ವಾಮೀಜಿ, ದಿವ್ಯಸಮ್ಮುಖ ವಹಿಸಲಿದ್ದಾರೆ. ಚಾಮರಾಜನಗರ, ಹಳೇ ಮೈಸೂರು ಭಾಗದ ನೂರು ಮಠಗಳ ಪೂಜ್ಯರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನೆರವೇರಲಿದೆ. ಕಾರ್ಯಕ್ರಮಕ್ಕೆ ಶ್ರೀ ಮಠದ ಭಕ್ತರು ತನು ಮನ ಧನವನ್ನು ದಾಸೋಹ ಭಾವನೆಯಿಂದ ಅರ್ಪಿಸಬೇಕು ಎಂದು ಮನವಿ ಮಾಡಿದರು.