ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆಗೆ ಸಹಕರಿಸಿ

ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೆಟಿಯನ್ ಕ್ಯಾಂಪ್‌ಗೆ ಬಿಆರ್‌ಟಿ ಹುಲಿ ಯೋಜನೆಯ ನಿದೇರ್ಶಕ ಶ್ರೀಪತಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಪ್ರಮೋದ್, ತ್ರುಪ್ತೇನ್ ಇತರರಿದ್ದರು.
ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೆಟಿಯನ್ ಕ್ಯಾಂಪ್‌ಗೆ ಬಿಆರ್‌ಟಿ ಹುಲಿ ಯೋಜನೆಯ ನಿದೇರ್ಶಕ ಶ್ರೀಪತಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಪ್ರಮೋದ್, ತ್ರುಪ್ತೇನ್ ಇತರರಿದ್ದರು.
Published on

ಬಿಆರ್‌ಟಿ ಹುಲಿ ಯೋಜನೆಯ ನಿದೇರ್ಶಕ ಶ್ರೀಪತಿ ಕರೆ

ಹನೂರು: ಆನೆಗಳು ಸಂಚಾರವಿರುವ ಪ್ರದೇಶದಲ್ಲಿ ಜಾಗರೂಕತೆ ವಹಿಸುವುದರ ಮೂಲಕ ಮಾನವ-ವನ್ಯಜೀವಿ ಸಂಘರ್ಷದ ತಡೆಗೆ ಪ್ರತಿಯೊಬ್ಬರೂ ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಬಿಆರ್‌ಟಿ ಹುಲಿ ಯೋಜನೆಯ ನಿದೇರ್ಶಕ ಶ್ರೀಪತಿ ತಿಳಿಸಿದರು.
ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೆಟಿಯನ್ ನಿರಾಶ್ರಿತರ ಕೇಂದ್ರದ ಸಭಾ ಭವನದಲ್ಲಿ ಗುರುವಾರ ಮಾನವ ವನ್ಯಜೀವಿ ಸಂಘರ್ಷ ತಡೆ ಸಂಬಂಧ ಗ್ರಾಮಸ್ಥರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದ ಅಂಚಿನಿಂದ ಕೂಡಿರುವ ಈ ಭಾಗದಲ್ಲಿ ಕಾಡಾನೆಗಳು ಸಂಚರಿಸುವುದು ಸಾಮಾನ್ಯ. ಆನೆಗಳು ಗ್ರಾಮದತ್ತ ಆಗಮಿಸದಂತೆ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಅಗತ್ಯ ಕ್ರಮವಹಿಸಲಾಗಿದೆ. ಆದರೂ ಜನರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ನಿಮ್ಮೆಲ್ಲರ ಪಾತ್ರ ಅಪಾರವಾಗಿದ್ದು, ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಇದರಿಂದ ಮಾನವ ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶ್ರೀಪತಿ ಅವರು ಟಿಬೆಟಿಯನ್ ಕ್ಯಾಂಪ್ ಅಧಿಕಾರಿಗಳು ಹಾಗೂ ಸ್ಥಳೀಯ ಜನರೊಂದಿಗೆ ಕಾಡಾನೆ ದಾಳಿಯಿಂದ ಹಾನಿಯಾಗಿರುವ ಸ್ಥಳ ಹಾಗೂ ಆನೆಗಳು ರಸ್ತೆ ದಾಟುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳೀಯರು ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಆತಂಕಕ್ಕೆ ಒಳಗಾಗಿದ್ದೇವೆ. ಜತೆಗೆ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದ್ದು, ಕೃಷಿಯಲ್ಲಿ ನಷ್ಟವನ್ನು ಅನುಭವಿಸುವಂತಾಗಿದೆ. ಆದರೆ ಕಾಡಾನೆಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಆದ್ದರಿಂದ ಕಾಡಾನೆಗಳು ಸಂಚರಿಸುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ, ಹಾಳಾಗಿರುವ ಕಡೆಗಳಲ್ಲಿ ಆನೆ ಕಂದಕವನ್ನು ಸರಿಪಡಿಸುವಿಕೆ ಹಾಗೂ ನಷ್ಟವಾಗಿರುವ ಬೆಳೆಗಳಿಗೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಶ್ರೀಪತಿ ಅವರು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆರ್‌ಎಫ್‌ಒ ಪ್ರಮೋದ್, ಟಿಬೆಟಿಯನ್ ಸೆಟ್ಲಮೆಂಟ್ ಅಧಿಕಾರಿ ತ್ರುಪ್ತೇನ್ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net