ತಾಲೂಕಿನಲ್ಲಿ ಒಂದು ವಾರದಿಂದ ಆಗಾಗ್ಗೆ ಮಳೆಯಾಗುತ್ತಿದ್ದು, ವಿಪರೀತ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ತಂಪು ಅನುಭವ ನೀಡಿದೆ. ರಾತ್ರಿ ಸುಮಾರು 7.30ರ ಹೊತ್ತಿಗೆ ಹನೂರು ಪಟ್ಟಣ ಸೇರಿದಂತೆ ಬಂಡಳ್ಳಿ, ಲೊಕ್ಕನಹಳ್ಳಿ, ಒಡೆಯರಪಾಳ್ಯ, ಕೌದಳ್ಳಿ, ರಾಮಾಪುರ, ಮಾರ್ಟಳ್ಳಿ, ಹೂಗ್ಯಂ, ಮಿಣ್ಯಂ, ಮಂಗಲ, ಮಣಗಳ್ಳಿ ಹಾಗೂ ಇನ್ನಿತರ ಬಹುತೇಕ ಗ್ರಾಮಗಳಲ್ಲಿ ಆರಂಭವಾದ ಜೋರು ಮಳೆ ಸುಮಾರು ಒಂದೂವರೆ ಗಂಟೆ ಕಾಲ ಸುರಿಯಿತು. ಇದರಿಂದ ಬರಿದಾಗಿ ನಿಂತಿದ್ದ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾದರೆ, ಹಳ್ಳಕೊಳ್ಳಗಳಲ್ಲಿ ನೀರು ಹರಿಯಿತು. ಅಂತರ್ಜಲ ಮಟ್ಟ ಸುಧಾರಣೆಗೊಂಡಿದ್ದು, ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಲ್ಲಿ ಜನರು ಹಾಗೂ ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ. ಇತ್ತ ರೈತರ ಮೊಗದಲ್ಲಿ ಈ ಮಳೆ ಮಂದಹಾಸ ಮೂಡಿಸಿದ್ದು, ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದಗೊಳಿಸಲು ಮುಂದಾಗಿದ್ದಾರೆ.