ಹುಂಡಿಪುರದಲ್ಲಿ ಆರೋಗ್ಯ ತಪಾಸಣೆ

 ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಕರ್ತವ್ಯನಿರ್ವಹಿಸಿದ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರ ತಂಡ.
ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಕರ್ತವ್ಯನಿರ್ವಹಿಸಿದ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ
  • ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರು ತಪಾಸಣೆ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು.
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗಳ ಸಮೂಹದ ಅಂಗ ಸಂಸ್ಥೆಯಾದ ಸ್ಪರ್ಶ್ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಬಿರದಲ್ಲಿ 500ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಪಾಲ್ಗೊಂಡು ರೋಗ ನಿರೋಧಕ ತಪಾಸಣೆ, ತಜ್ಞ ವೈದ್ಯರ ಸಮಾಲೋಚನೆ, ಹೆಚ್ಚಿನ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ಆರೋಗ್ಯ ಸಲಹೆಗಳನ್ನು ಪಡೆದುಕೊಂಡರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಇಸಿಜಿ ತಪಾಸಣೆಗಳನ್ನು ಮಾಡಲಾಯಿತು. ಕಣ್ಣಿನ ಆರೈಕೆ, ಮೂಳೆ ಮತ್ತು ಕೀಲು, ದಂತ ಆರೈಕೆ, ಮಕ್ಕಳ ಕಾಯಿಲೆ ಮತ್ತು ಸಾಮಾನ್ಯ ವೈದ್ಯಕೀಯ ಸೇರಿದಂತೆ ಪ್ರಮುಖ ವಿಭಾಗಗಳ ತಜ್ಞವೈದ್ಯರಿಂದ ಸಮಾಲೋಚನೆಗಳನ್ನು ಒದಗಿಸಲಾಯಿತು.
ತಪಾಸಣೆಗೊಳಗಾದವರಿಗೆ ಅವರ ಆರೋಗ್ಯದ ಸಮಸ್ಯೆಗಳಿಗೆ ಅನುಗುಣವಾಗಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಇದಲ್ಲದೆ, ಹೆಚ್ಚಿನ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಂಚಾಯಿತಿ ಮುಖಾಂತರ ಅಗತ್ಯ ಮಾರ್ಗದರ್ಶನ ಹಾಗೂ ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.
ಪ್ರಾಥಮಿಕ ಹಂತದಲ್ಲೇ ಕಾಯಿಲೆ ಪತ್ತೆ ಮುಖ್ಯ: ಶಿಬಿರಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಕಾಲಕ್ಕೆ ಸರಿಯಾದ ಆರೋಗ್ಯ ಸೇವೆ ಸಿಗುವುದು ಮುಖ್ಯ. ಇಂತಹ ಶಿಬಿರಗಳು ಹಳ್ಳಿಗಳ ಮಟ್ಟದಲ್ಲಿಯೇ ಅಗತ್ಯ ತಪಾಸಣೆ ಮತ್ತು ತಜ್ಞರ ಆರೈಕೆಯನ್ನು ಒದಗಿಸಲು ಸಹಾಯ ಮಾಡುತ್ತವೆ. ಇದರಿಂದ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಕುಟುಂಬ ಮತ್ತು ಸಮಾಜದ ಯೋಗಕ್ಷೇಮ, ಜೀವನೋಪಾಯ ಹಾಗೂ ಉತ್ತಮ ಜೀವನಮಟ್ಟಕ್ಕೆ ಉತ್ತಮ ಆರೋಗ್ಯ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸ್ಪರ್ಶ್ ಫೌಂಡೇಶನ್‌ನ ಉಪಾಧ್ಯಕ್ಷ ಸತ್ಯ ಮಾತನಾಡಿ, ಸೌಲಭ್ಯ ವಂಚಿತ ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಸುಲಭವಾಗಿ ಮತ್ತು ಎಲ್ಲರಿಗೂ ಸಿಗುವಂತೆ ಮಾಡುವುದು ನಮ್ಮ ಗುರಿ. ಹುಂಡಿಪುರ ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ, ರೋಗ ಬರುವ ಮುನ್ನವೇ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ ಎಂದರು.
ಸಕಾಲಿಕ ರೋಗಪತ್ತೆಯ ಕೊರತೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ, ಆರೋಗ್ಯ ಸೇವೆಯನ್ನು ಕೇವಲ ಆಸ್ಪತ್ರೆಯ ಗೋಡೆಗಳಿಗಷ್ಟೇ ಸೀಮಿತಗೊಳಿಸದೆ ಜನರ ಬಳಿಗೆ ಕೊಂಡೊಯ್ಯುವ ಮಹತ್ವವನ್ನು ಈ ಕಾರ್ಯಕ್ರಮವು ಎತ್ತಿ ತೋರಿಸುತ್ತದೆ. ತಜ್ಞರ ಸಮಾಲೋಚನೆಗಳು, ಸ್ಥಳೀಯ ಆಡಳಿತದ ಬೆಂಬಲ ಮತ್ತು ವ್ಯವಸ್ಥಿತ ಮಾರ್ಗದರ್ಶನದ ಮೂಲಕ ಆರೋಗ್ಯ ಸೇವೆಗಳಲ್ಲಿನ ಅಂತರವನ್ನು ಕಡಿಮೆ ಮಾಡಲು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಹೇಳಿದರು. ಶಿಬಿರದಲ್ಲಿ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net