ಹನೂರು : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಡಿ.30 ಮತ್ತು 31 ರಂದು ಬಿರ್ಸಾ ಮುಂಡಾ
150ನೇ ಜಯಂತಿ ಆಯೋಜನೆಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಶನಿವಾರ ಬಿರ್ಸಾಮುಂಡಾ ಜಯಂತಿ ಆಚರಣೆಯ ಸಿದ್ಧತೆ ಕುರಿತು ಆಯೋಜಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಂಘದ ಪದಾಧಿಕಾರಿಗಳು ಕ್ರಿಯಾಶೀಲತೆಯಿಂದ ಭಾಗವಹಿಸುವುದರ ಜತೆಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಸಮಸ್ಯೆಯಾಗದಂತೆ ಮುತುರ್ವಜಿ ವಹಿಸಬೇಕು. ಕಾರ್ಯಕ್ರಮಕ್ಕೆ ಹಾಡಿಗಳಿಂದ ಹೆಚ್ಚಿನ ಜನರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಕಾರ್ಯಕ್ರಮ ಯಶವಾಗಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಸಂಯೋಜಕ ಮಹದೇವಸ್ವಾಮಿ ಮಾತನಾಡಿ, ಜಯಂತಿ ಕಾರ್ಯಕ್ರಮದ ಅಂಗವಾಗಿ ಮೊದಲನೆ ದಿನ ಸಂವಾದ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣೆ, ಗಿರಿಜನರು ಬಳಸುವ ವಸ್ತುಗಳ ವಸ್ತು ಪ್ರದರ್ಶನ ಹಾಗೂ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 2ನೇ ದಿನ ಬಿರ್ಸಾ ಮುಂಡಾ ಅವರ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಿಂದ ಮುಖ್ಯ ರಸ್ತೆಯಲ್ಲಿ ನಡೆಯಲಿದೆ. ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಸೇರಿದಂತೆ ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ತಿಳಿಸಿದರು.
ಬುಡಕಟ್ಟು ರಾಜ್ಯ ಸಂಚಾಲಕ ಮುತ್ತಯ್ಯ, ಜಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಜಂಟಿ ಕಾರ್ಯದರ್ಶಿ ಮಾದೇವ, ತಾಲೂಕು ಸಂಘದ ಜಂಟಿ ಕಾರ್ಯದರ್ಶಿ ಅರುಣ್‌ಕುಮಾರ್, ಉಪಾಧ್ಯಕ್ಷೆ ಮಾದಮ್ಮ, ಲ್ಯಾಪ್ ಸೊಸೈಟಿ ಉಪಾಧ್ಯಕ್ಷ ಚಂದ್ರು, ಆರೋಗ್ಯ ಸಂಯೋಜಕ ರಾಜಪ್ಪ ಹಾಗೂ ಇನ್ನಿತರರು ಇದ್ದರು.