ಫಲಿತಾಂಶಕ್ಕೆ ಕಾರಣ: ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟನಲ್ಲಿ ಬಿಇಒ ಮಹೇಶ್, ಅಧಿಕಾರಿಗಳು ಹಾಗೂ ಶಿಕ್ಷಕರು ಹೆಚ್ಚಿನ ಒತ್ತು ನೀಡಿ ಇನ್ನಿಲ್ಲದ ಶ್ರಮ ವಹಿಸಿದ್ದರು. ವಲಯದ 44 ಪ್ರೌಢಶಾಲೆಗಳಲ್ಲಿ ಸರ್ಕಾರದ 29 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿತ್ತು. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಮೌಲ್ಯಮಾಪನ ಚಟುವಟಿಕೆಗಳು, ಕಲಿಕಾ ಪ್ರಗತಿಯ ಅವಲೋಕನ, ಪರಿಹಾರ ಬೋಧನೆ, ರಾತ್ರಿ ತರಗತಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಭೆ, ಭಾಷವಾರು ಹಾಗೂ ಕೋರ್ ವಿಷಯವಾರು ಶಿಕ್ಷಕರಿಗೆ ನೀಲಿನಕ್ಷೆ ಆಧಾರಿತ ತರಬೇತಿ, ಮಕ್ಕಳ ಮನೆಗಳಿಗೆ ಅಧಿಕಾರಿಗಳು, ಶಿಕ್ಷಕರ ಭೇಟಿ ಸೇರಿದಂತೆ ಹಲವು ಕಾರ್ಯತಂತ್ರವನ್ನು ಕೈಗೊಳ್ಳಲಾಗಿತ್ತು. ಜತೆಗೆ ವಿಶೇಷವಾಗಿ ಶಾಸಕ ಎಂ.ಆರ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಭರವಸೆಯ ಬೆಳಕು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಧೈರ್ಯ ತುಂಬಿಸುವುದರ ಜತೆಗೆ ಸಂಪನ್ಮೂಲ ಶಿಕ್ಷಕರಿಂದ ವಿಷಯವಾರು ಅಗತ್ಯ ಮಾರ್ಗದರ್ಶನ ನೀಡಲಾಗಿತ್ತು. ಇದರ ಪರಿಣಾಮ ಶೈಕ್ಷಣಿಕ ವಲಯ ಈ ಬಾರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.