ಹನೂರು:ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಬುಧವಾರ ರಾತ್ರಿ ನೀರಿದ್ದ ಬಾವಿಗೆ ಬಿದ್ದಿದ್ದ ಗಂಡು ಜಿಂಕೆಯನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿ ರಕ್ಷಿಸಿದರು.
ಪಟ್ಟಣ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಜಿಂಕೆ ರಾತ್ರಿ 8.30ರಲ್ಲಿ ನಾರಾಯಣ ಅವರ 60 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದಿದೆ. ಈ ವಿಚಾರ ತಿಳಿದ ನಾರಾಯಣ ಅವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದರು. ಬಳಿಕ ಜಿಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದು, ಕೆಲಕಾಲ ಆರೈಕೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಆನಂದ್, ಅಶೋಕ್, ಲಿಂಗೇಶ್, ಮನೋಹರ್ ಹಾಗೂ ಅನಿಲ್ ಭಾಗವಹಿಸಿದ್ದರು.