ಗಿರಿಜನರಿಗೆ ದೊರಕಲಿ ಸಮರ್ಪಕ ಸೌಕರ್ಯ

 ಹನೂರು ತಾಲೂಕಿನ ಕೌಳಿಹಳ್ಳ ಡ್ಯಾಂ ಗಿರಿಜನರ ಹಾಡಿಯಲ್ಲಿ ಆಯೋಜಿಸಿದ್ದ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಉದ್ಘಾಟಿಸಿದರು. ಪ್ರಮೋದ್, ರಘುನಾಥ್, ಡಾ.ಸಿ ಮಾದೇಗೌಡ, ರಂಗೇಗೌಡ ಇತರರಿದ್ದರು.
ಹನೂರು ತಾಲೂಕಿನ ಕೌಳಿಹಳ್ಳ ಡ್ಯಾಂ ಗಿರಿಜನರ ಹಾಡಿಯಲ್ಲಿ ಆಯೋಜಿಸಿದ್ದ ಅರಣ್ಯ ಹಕ್ಕು ಸಮಿತಿ ಗ್ರಾಮಸಭೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಉದ್ಘಾಟಿಸಿದರು. ಪ್ರಮೋದ್, ರಘುನಾಥ್, ಡಾ.ಸಿ ಮಾದೇಗೌಡ, ರಂಗೇಗೌಡ ಇತರರಿದ್ದರು.
Published on
ಹನೂರು: ಅರಣ್ಯ ಹಕ್ಕು 2006ರ ಕಾಯ್ದೆಯಡಿ ಗಿರಿಜನರಿಗೆ ಜಮೀನು ಹಾಗೂ ನಿವೇಶನದ ಹಕ್ಕುಪತ್ರ ನೀಡುವುದು ಸೇರಿದಂತೆ ಅಗತ್ಯ ಸೌಕರ್ಯ ಒದಗಿಸುವಂತೆ ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಒತ್ತಾಯಿಸಿದರು.
ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಳಿಹಳ್ಳ ಡ್ಯಾಂ ಗಿರಿಜನರ ಹಾಡಿಯಲ್ಲಿ ಬುಧವಾರ ಆಯೋಜಿಸಿದ್ದ ಅರಣ್ಯ ಹಕ್ಕುಗಳ ಸಮಿತಿ ಗ್ರಾಮಸಭೆಯಲ್ಲಿ ಮಾತನಾಡಿದರು.
ಗಿರಿಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದ್ದು, ಇದರಡಿ ಹಲವು ಸವಲತ್ತು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ 2,050 ಗಿರಿಜನರು ಭೂಮಿ ಹಕ್ಕುಪತ್ರ ಪಡೆದಿದ್ದಾರೆ. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ 48 ಗ್ರಾಮಗಳಿಗೆ ಸಮುದಾಯದ ಹಕ್ಕುಪತ್ರ ಸಿಕ್ಕಿದೆ. ಆದರೆ, ಈ ಕಾಯ್ದೆಯಡಿ ಗಿರಿಜನರು ಕೆಲ ಹಕ್ಕುಗಳನ್ನು ಈವರೆಗೂ ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರ ನೀಡಿರುವ ಜಮೀನಿನಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಹಕ್ಕುಪತ್ರ ದೊರೆತಿಲ್ಲ. ಇದರಿಂದ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಸಮಸ್ಯೆಯಾಗಿದ್ದು, ನಿವೇಶನ, ಭೂಮಿ ಹಕ್ಕುಪತ್ರ ನೀಡಬೇಕಿದೆ ಎಂದರು.
ಗಿರಿಜನರು ಅನಾದಿ ಕಾಲದಿಂದಲೂ ಅರಣ್ಯ ಪ್ರದೇಶದೊಳಗಿನ ದೇಗುಲ ಹಾಗೂ ಕಲ್ಲುಗುಡಿಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಆದ್ದರಿಂದ ಸಮುದಾಯ ಹಕ್ಕು ಯೋಜನೆಯಡಿ ಕಾನೂನಿನಡಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಹಾಡಿಗಳಿಗೆ ಸ್ಮಶಾನ ಸೌಕರ್ಯ, ಅಂಗನವಾಡಿ ಕೇಂದ್ರ, ಸಮರ್ಪಕ ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯ ಸೌಕರ್ಯ ಕಲ್ಪಿಸಬೇಕು. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೆಳಗೊಳದಲ್ಲಿ ವಾಸಿಸುತ್ತಿದ್ದ ಗಿರಿಜನರನ್ನು ಲೊಕ್ಕನಹಳ್ಳಿ ಸಮೀಪದ ಸೇಬಿನಕೋಬೆ ಗ್ರಾಮಕ್ಕೆ ಸ್ಥಳಾಂತರಿಸಿದ್ದು, ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಸರ್ಕಾರ ಜಮೀನು ನೀಡಿದೆ. ಆದರೆ ಹಕ್ಕುಪತ್ರ ನೀಡಿಲ್ಲ. ಹಾಗಾಗಿ ಹಕ್ಕುಪತ್ರ ನೀಡುವ ಕಾರ್ಯವಾಗಬೇಕಿದೆ. ಗಿರಿಜನರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ಆರ್‌ಎಫ್‌ಒ ಪ್ರಮೋದ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಅಗತ್ಯ ಸೌಕರ್ಯ ಪಡೆಯುವುದು ಗಿರಿಜನರ ಹಕ್ಕು. ಹಾಗಾಗಿ ಈವರೆಗೂ ಸಿಗದ ಸೌಕರ್ಯದ ಬಗ್ಗೆ ಹಾಗೂ ಗಿರಿಜನರು ಸಲ್ಲಿಸಿರುವ ಅರ್ಜಿಗಳನ್ನು ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರವಹಿಸಲಾಗುವುದು ಎಂದು ಭರವಸೆ ನೀಡಿದರು.
ಕುಡಿತ ಬಿಡಿ, ಶಿಕ್ಷಣ ಕೊಡಿ: ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ರಾಜೇಶ್ ಮಾತನಾಡಿ, ಗಿರಿಜನರ ಕಲ್ಯಾಣಕ್ಕೆ ಸರ್ಕಾರ ಹಲವು ಸವಲತ್ತು ನೀಡುತ್ತಿದೆ. ಆದರೆ, ಸೋಲಿಗರು ಕುಡಿತದ ಚಟಕ್ಕೆ ಒಳಗಾಗಿರುವುದರಿಂದ ಸಮುದಾಯದ ಅಭಿವೃದ್ಧಿಗೆ ತೊಡಕಾಗಿದೆ. ಆದ್ದರಿಂದ ಮೊದಲು ಮದ್ಯ ಸೇವಿಸುವುದನ್ನು ಬಿಡಿ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅವರನ್ನು ಆಸ್ತಿಯಾಗಿ ಮಾಡಿ ಎಂದು ಸಲಹೆ ನೀಡಿದರು.
ಇದೇ ವೇಳೆ ಕೌಳಿಹಳ್ಳ ಸೇರಿದಂತೆ ಸೇಬಿನಕೋಬೆ, ಜಡೇಸ್ವಾಮಿ ದೊಡ್ಡಿ ಹಾಗೂ ಬೂದಿಪಡಗದ 150ಕ್ಕೂ ಹೆಚ್ಚು ಗಿರಿಜನರು ವಿವಿಧ ಸೌಕರ್ಯಕ್ಕಾಗಿ ಅರ್ಜಿ ಸಲ್ಲಿಸಿದರು.
ಪಿಡಿಒ ರಘುನಾಥ್, ಆರ್‌ಎಫ್‌ಒ ವಾಸು, ಸೋಲಿಗ ಅಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ರಂಗೇಗೌಡ, ತಾಲೂಕು ಕಾರ್ಯದರ್ಶಿ ರಂಗೇಗೌಡ, ಗ್ರಾಮ ಸಮಿತಿ ಅಧ್ಯಕ್ಷರಾದ ಈರೇಗೌಡ, ಸಿದ್ದರಾಜು, ಮುತ್ತೇಗೌಡ, ಸಿದ್ದೇಗೌಡ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net